ಸಾರಾಂಶ
ಚಿತ್ರದುರ್ಗ: ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮುದಾಯಕ್ಕೆ ಮಹಾ ದ್ರೋಹವಾಗಿದೆ. ಒಳ ಮೀಸಲು ವಿಚಾರದಲ್ಲಿ ಮತ್ತೊಂದು ದ್ರೋಹ ವೆಸಗಲು ಪಕ್ಷ ಸಜ್ಜಾಗಿದೆ ಎಂದು ಮಾದಿಗ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.ಒಳ ಮೀಸಲು ಜಾರಿ ಸಂಬಂಧ ಶುಕ್ರವಾರ ಮಾದಿಗ ಮಹಾಸಭಾದವರು ಜಾಲಿಕಟ್ಟೆ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಳ ಮೀಸಲು ಜಾರಿಗೆ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು. ಒಳ ಮೀಸಲಾತಿ ಜಾರಿಗಾಗಿ ಮೂವತ್ತು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾದಿಗರನ್ನು ವಂಚಿಸಿಕೊಂಡು ಬರುತ್ತಿವೆಯೇ ವಿನಃ ಒಳ ಮೀಸಲಾತಿಯನ್ನು ಜಾರಿಗೆ ತರುವ ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್‌ರವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಚಿತ್ರದುರ್ಗದಲ್ಲಿ ನಡೆದ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಘೋಷಿಸಿದ್ದರು. ಸಮಾವೇಶ ನಡೆದು ಅನೇಕ ತಿಂಗಳುಗಳೇ ಉರುಳಿದೆ. ಶೇ.90 ರಷ್ಟು ಮಾದಿಗ ಜನಾಂಗ ಇಲ್ಲಿಯವರೆಗೂ ಕಾಂಗ್ರೆಸ್‌ಗೆ ಮತ ನೀಡುತ್ತಾ ಬರುತ್ತಿದೆ. ಎಲ್ಲಾ ಪಕ್ಷಗಳು ದಲಿತರನ್ನು ಮತ ಬ್ಯಾಂಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದಕ್ಕೆ ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಮಾದಿಗರಿಗೆ ಸಾಮಾಜಿಕ ನ್ಯಾಯ ನೀಡಬೇಕೆಂಬ ಕಳಕಳಿಯಿದ್ದರೆ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹುಲ್ಲೂರು ಕುಮಾರಸ್ವಾಮಿ, ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆಯಾ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕೆಂಬುದು ನಮ್ಮ ಕನಸು. ಒಳ ಮೀಸಲಾತಿ ಜಾರಿಯಾಗುವತನಕ ಎಲ್ಲಾ ನೇಮಕಾತಿಗಳನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೆ ತಿಂಗಳ 28 ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಒಳ ಮೀಸಲಾತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಮಾದಿಗ ಮಹಾಸಭಾದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಮಾದಿಗ ಮಹಾಸಭಾದ ತಿಪ್ಪೇಸ್ವಾಮಿ, ಬಸವರಾಜ್, ಗೌತಮ್, ಸುನೀಲ್, ರೇಣುಕಮ್ಮ, ದುರುಗಮ್ಮ, ಮಾರುತಿ, ಪ್ರತಾಪ್, ಡಿ.ರಾಜಣ್ಣ, ಶಿವಣ್ಣ, ತಿಪ್ಪೇಸ್ವಾಮಿ ಬೆಳಗಟ್ಟ ಪ್ರತಿಭಟನೆ ನೇತೃತ್ವ ವಹಿಸಿದ್ದರು.