ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಉತ್ತಮ ಸಾಲ ಸೌಲಭ್ಯ

| Published : Nov 25 2024, 01:00 AM IST

ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಉತ್ತಮ ಸಾಲ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರಕೃಷಿ ಕ್ಷೇತ್ರಕ್ಕೆ ನಬಾರ್ಡ್ ನೀಡುತ್ತಿರುವ ಅನುದಾನ ಕಡಿತಗೊಳಿಸಿದ್ದರೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ರೈತರಿಗೆ ಉತ್ತಮ ಸಾಲ ಸೌಲಭ್ಯ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಮೂಲಕ 750ಕೋಟಿ ರು. ಪುನರ್‌ಧನಕ್ಕೆ ಬೇಡಿಕೆ ಸಲ್ಲಿಸಿದ್ದರೂ ಕೇವಲ ₹113ಕೋಟಿ ಮಾತ್ರ ನಬಾರ್ಡ್ ನೀಡಿದೆ ಎಂದು ಹೇಳಿದರು.

2021ರಲ್ಲಿ ₹310ಕೋಟಿ, 2022ರಲ್ಲಿ ₹305 ಕೋಟಿ, 2023ಕ್ಕೆ ₹294 ಕೋಟಿ ನೀಡಿದ್ದು, ವರ್ಷದಿಂದ ವರ್ಷಕ್ಕೆ ನಬಾರ್ಡ್ ಅನುದಾನ ಕಡಿಮೆಯಾಗುತ್ತಿದೆ.

ಗ್ರಾಮೀಣ ರೈತರ ಹಿತಕ್ಕಾಗಿ ರಚನೆಯಾದ ನಬಾರ್ಡ್ ತನ್ನ ಕಾರ್ಯವನ್ನೇ ಮರೆತಿದೆ. ಡಿಸಿಸಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ತಾಲೂಕಿನ 13,896 ಸದಸ್ಯರಿಗೆ ₹150ಕೋಟಿ, 3,615ಸದಸ್ಯರಿಗೆ ₹24.12 ಕೋಟಿ ಹೆಚ್ಚುವರಿ ಸಾಲ ಹಾಗೂ 386 ಹೊಸ ಸದಸ್ಯರಿಗೆ ₹3.48 ಕೋಟಿ ಹೊಸಸಾಲ ಸೇರಿ ಒಟ್ಟು ₹177.60 ಕೋಟಿ ಬೆಳೆಸಾಲ ನೀಡಿದ್ದು, ಈ ಹಿಂದಿನಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದರು.

ತಾಲೂಕಿನ ನಿರ್ದೇಶಕರೆ ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರೂ ಕೂಡ ಇಷ್ಟೊಂದು ಪ್ರಮಾಣದಲ್ಲಿ ರೈತರಿಗೆ ಅನುಕೂಲ ಕಲ್ಪಿಸಿರಲಿಲ್ಲ. ಡಿಸಿಸಿ ಬ್ಯಾಂಕ್ ಈಗಿನ ಅಧ್ಯಕ್ಷ ಮಂಜುನಾಥಗೌಡರು ರೈತರ ಹಿತ ಕಾಯುವ ಪ್ರಮಾಣಿಕ ಕೆಲಸ ಮಾಡಿದ್ದಾರೆ. ಅದಕ್ಕೆ ತಾಲೂಕಿನ ಎಲ್ಲ ಸಹಕಾರ ಸಂಘಗಳ ನಿರ್ದೇಶಕರು, ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ತಾಲೂಕಿನಲ್ಲಿ ಈಗ ಮೂರು ಡಿಸಿಸಿ ಬ್ಯಾಂಕ್ ಶಾಖೆಗಳಿದ್ದು, ಸುಣ್ಣದಕೊಪ್ಪದಲ್ಲಿ ಮತ್ತೊಂದು ಶಾಖೆ ಆರಂಭಕ್ಕೆ ಅನುಮೋದನೆ ಪಡೆಯಲಾಗಿದ್ದು, ರಾಜ್ಯದಲ್ಲೇ ಜಿಲ್ಲೆಯ ಡಿಸಿಸಿ ಬ್ಯಾಂಕ್ ಮಾದರಿಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಸ್.ರವೀಂದ್ರ, ಕಸಬಾ ಸೊಸೈಟಿ ಅಧ್ಯಕ್ಷ ಪಾಲಾಕ್ಷಪ್ಪ, ವೀರಶೈವ ಸೊಸೈಟಿ ಅಧ್ಯಕ್ಷ ಹುಚ್ಚರಾಯಪ್ಪ, ಅಂಬಾರಗೊಪ್ಪ ಸೊಸೈಟಿ ಅಧ್ಯಕ್ಷ ರಮೇಶ್, ಈಸೂರು ಸೊಸೈಟಿ ಅಧ್ಯಕ್ಷ ಸತೀಶ್, ನೆಲವಾಗಿಲು ಸೊಸೈಟಿ ಅಧ್ಯಕ್ಷ ಅರುಣ್, ಕಪ್ಪನಹಳ್ಳಿ ಸೊಸೈಟಿ ಅಧ್ಯಕ್ಷ ಸುದರ್ಶನ ನಾಯ್ಡು, ಸಾಲೂರು ಸೊಸೈಟಿ ಅಧ್ಯಕ್ಷ ಮಂಜುನಾಥ್ ಇದ್ದರು.