ಸಾರಾಂಶ
ಜಂಕ್‌ಫುಡ್, ಫಾಸ್ಟ್‌ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾಲಿಗೆ ರುಚಿಗೆ ಮಕ್ಕಳು ಕೂಡ ಅಂತಹ ಆಹಾರಗಳಿಗೆ ಆಕರ್ಷಿತರಾಗಿದ್ದಾರೆ. ಅವು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಮಕ್ಕಳನ್ನು ಅಂತಹ ಆಹಾರ ಸೇವನೆಯಿಂದ ದೂರವಿಡಬೇಕು. ನಾವೂ ಕೂಡ ಉತ್ತಮ ಆಹಾರ ಸೇವನೆಗೆ ಆದ್ಯ ಗಮನ ಕೊಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ದೇಸಿ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ನಡೆಸಬಹುದು. ಜಂಕ್ ಫುಡ್‌ಗಳಿಂದ ದೂರವಿರಬೇಕು. ಕಾಯಿಲೆಗಳಿಗೆಲ್ಲಾ ಅವುಗಳೇ ಮೂಲ ಎಂದು ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.ನಗರದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಇವರ ಆಶ್ರಯದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಮಾತನಾಡಿದರು. ತರಕಾರಿ, ಸೊಪ್ಪು, ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು. ರಾಗಿ ಮುದ್ದೆ ಸೇವನೆ ಆರೋಗ್ಯ ಪೂರ್ಣ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಉತ್ತಮ ಆಹಾರ ಸೇವನೆಯಿಂದ ನಮ್ಮ ಪೂರ್ವಜರು ದೀರ್ಘಾಯುಷಿಗಳಾಗಿದ್ದರು ಎಂದರು.
ಜಂಕ್‌ಫುಡ್, ಫಾಸ್ಟ್‌ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾಲಿಗೆ ರುಚಿಗೆ ಮಕ್ಕಳು ಕೂಡ ಅಂತಹ ಆಹಾರಗಳಿಗೆ ಆಕರ್ಷಿತರಾಗಿದ್ದಾರೆ. ಅವು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಮಕ್ಕಳನ್ನು ಅಂತಹ ಆಹಾರ ಸೇವನೆಯಿಂದ ದೂರವಿಡಬೇಕು. ನಾವೂ ಕೂಡ ಉತ್ತಮ ಆಹಾರ ಸೇವನೆಗೆ ಆದ್ಯ ಗಮನ ಕೊಡಬೇಕು ಎಂದರು.ಪ್ರತಿಯೊಬ್ಬರು ಉತ್ತಮ ಜೀವನ ನಿರ್ವಹಣೆ ರೂಢಿಸಿಕೊಂಡು ನಿಯಮಿತ ವ್ಯಾಯಾಮ, ಧ್ಯಾನ, ಶುಚಿತ್ವ, ಒಳ್ಳೆಯ ಆಹಾರವನ್ನು ರೂಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದೇ ವಿಶ್ವ ಆರೋಗ್ಯದಿನದ ಉದ್ದೇಶವಾಗಿದೆ ಎಂದರು.
ಪ್ರತಿ ವರ್ಷ ವಿಶ್ವ ಆರೋಗ್ಯ ದಿನವು ವಿಶೇಷ ಥೀಮ್ ಅನ್ನು ಆಧರಿಸಿದೆ. 2024ರ ಥೀಮ್ ‘ನನ್ನ ಆರೋಗ್ಯ, ನನ್ನ ಹಕ್ಕು’.ಈ ಥೀಮ್ ಎಲ್ಲ ಜನರಿಗೆ ಆರೋಗ್ಯ ಸೇವೆಗಳಿಗೆ ಸಮಾನ ಪ್ರವೇಶ ಮತ್ತು ಹಕ್ಕುಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಸಿ.ವೇಣುಗೋಪಾಲ್ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಸಿ.ಭವಾನಿ ಶಂಕರ್,ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಟಿ ನಾರಾಯಣ ಸ್ವಾಮಿ, ಕೆ.ಎಸ್.ಷಡಕ್ಷರಿ, ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜ್ ಪ್ರಾಂಶುಪಾಲ ಎಚ್.ಎಂ. ಶ್ರೀನಿವಾಸ್ ಹಾಜರಿದ್ದರು.