ಸಾರಾಂಶ
ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಉಡುಪಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಗಳೂರಿನ ಯೇನೆಪೋಯ ಮೆಡಿಕಲ್ ಕಾಲೇಜು, ಲಯನ್ಸ್ ಕ್ಲಬ್, ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ತಪಾಸಣೆ ಮತ್ತು ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ, ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಉಡುಪಿಆಧುನಿಕ ಯುಗದಲ್ಲಿ ಮನುಷ್ಯ ದೈನಂದಿನ ಕಾರ್ಯಗಳ ಮಧ್ಯೆ ಒತ್ತಡ ಅನುಭವಿಸಬೇಕಾಗುತ್ತಿದೆ. ಇದರಿಂದ ಹೊರಬರಲು ಜೀವನ ಶೈಲಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕು. ಅದು ಉತ್ತಮ ಆರೋಗ್ಯ ಹೊಂದಲೂ ಸಹಾಯಕವಾಗಿದೆ ಎಂದು ನಗರದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು.ಅವರು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಉಡುಪಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಗಳೂರಿನ ಯೇನೆಪೋಯ ಮೆಡಿಕಲ್ ಕಾಲೇಜು, ಲಯನ್ಸ್ ಕ್ಲಬ್, ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ತಪಾಸಣೆ ಮತ್ತು ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಸಮುದಾಯದ ರೋಗಗಳು ಹೆಚ್ಚಾಗಿ ಬರುತ್ತಿದ್ದು, ಇಂದು ವೈಯಕ್ತಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಶೇ.4ರಷ್ಟು ಜನರಲ್ಲಿ ರಕ್ತದೊತ್ತಡ, ಶೇ.5ರಷ್ಟು ಜನರಿಗೆ ಮಧುಮೇಹ ಪತ್ತೆಯಾಗುತ್ತಿದೆ. ಕಳೆದ 2-3 ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವಜನರ ಪ್ರಮಾಣ ಹೆಚ್ಚುತ್ತಿದೆ. ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ, ಕೃತಕ ಉಸಿರಾಟ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿದೆ. ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗಮುಕ್ತರಾಗಲು ಸಾಧ್ಯ ಎಂದರು.ಕ್ಯಾನ್ಸರ್ ತಜ್ಞೆ ಡಾ. ವಿನುತಾ ಮಾತನಾಡಿದರು. ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಿದ್ದರು.
ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ, ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್, ಮಿಷನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ದೀಪಾ ವೈ. ರಾವ್, ಡಾ. ಪವಿತ್ರ ಹಾಗೂ ಡಾ. ಅಕ್ಷತಾ, ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಳ್ಳಾಲ್, ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಧನಂಜಯ ಭಟ್ ಹಾಗೂ ಡಾ. ಗಣೇಶ್ ಕಾಮತ್ ಮತ್ತು ದಂತ ತಜ್ಞರಾದ ಡಾ. ನಾಗೇಶ್ ನಾಯಕ್ ಹಾಗೂ ಡಾ. ಸಾರಿಕಾ, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ನಿರೂಪಿಸಿದರು. ಖಜಾಂಜಿ ರಮಾದೇವಿ ವಂದಿಸಿದರು.ಇದೇ ಸಂದರ್ಭದಲ್ಲಿ ಆಯ್ದ 25 ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. ಸುಮಾರು 300 ಮಂದಿ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.