ಕೈಗಳ ಸ್ವಚ್ಛತೆಯಿಂದ ಹಲವಾರು ರೋಗರುಜಿನಗಳನ್ನು ನಿಯಂತ್ರಿಸಬಹುದಾಗಿದ್ದು, ಆರೋಗ್ಯ ರಕ್ಷಣೆಯ ಕವಚದಂತೆ ಉಪಯೋಗಿಯಾಗಿದೆ.

ಕನ್ನಡಪ್ರಭ ವಾರ್ತೆ ಕುಮಟಾ

ಕೈಗಳ ಸ್ವಚ್ಛತೆಯಿಂದ ಹಲವಾರು ರೋಗರುಜಿನಗಳನ್ನು ನಿಯಂತ್ರಿಸಬಹುದಾಗಿದ್ದು, ಆರೋಗ್ಯ ರಕ್ಷಣೆಯ ಕವಚದಂತೆ ಉಪಯೋಗಿಯಾಗಿದೆ. ಆದ್ದರಿಂದ ಮಕ್ಕಳಲ್ಲಿ ನಿಯಮಿತ ಕೈತೊಳೆದು ಸ್ವಚ್ಛತೆ ಕಾದುಕೊಳ್ಳುವ ಅಭ್ಯಾಸ ರೂಢಿಸುವ ಅಗತ್ಯವಿದೆ ಎಂದು ಸೀನಿಯರ್ ಚೇಂಬರ್ ಅಧ್ಯಕ್ಷ ವಸಂತರಾವ್ ಹೇಳಿದರು.

ಸಮರ್ಪಕವಾಗಿ ಕೈತೊಳೆಯುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ನೆಹರುನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಕುಮಟಾ ಕೆನರಾ ಲೆಜಿನ್ ವತಿಯಿಂದ ಕೈ ತೊಳೆಯುವ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಬೂನು ಮತ್ತು ನೀರಿನಿಂದ ಸರಿಯಾಗಿ ಕೈ ತೊಳೆಯುವುದರಿಂದ ಅತಿಸಾರದ ಪ್ರಕರಣಗಳು ಶೇ.೨೩ರಿಂದ ೪೦ರಷ್ಟು ಹಾಗೂ ಸಾಮಾನ್ಯ ಉಸಿರಾಟದ ಸೋಂಕುಗಳು ಶೇ.೧೬ರಿಂದ ೨೧ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಶಾಲಾ ಮಕ್ಕಳಲ್ಲಿ ಜಠರ-ಕರುಳಿನ ಕಾಯಿಲೆಯಿಂದಾಗುವ ಗೈರುಹಾಜರಿಯೂ ಶೇ.೨೯ರಿಂದ ೫೭ರಷ್ಟು ಕಡಿಮೆಯಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಜಗತ್ತಿನಲ್ಲಿ ಪ್ರತಿವರ್ಷ ಸುಮಾರು ೧.೭ ಬಿಲಿಯನ್ ಮಕ್ಕಳಲ್ಲಿ ಅತಿಸಾರದ ಪ್ರಕರಣಗಳು ವರದಿಯಾಗುತ್ತವೆ, ಆದರೆ ಕೈಗಳ ಸ್ವಚ್ಛತೆಯಿಂದ ಮಕ್ಕಳಲ್ಲಿ ಅತಿಸಾರ ಶೇ.೩೧ರಷ್ಟು ಕಡಿಮೆಯಾಗಿರುವುದು ಕೂಡಾ ಅಧ್ಯಯನಗಳು ಸಾಬೀತುಪಡಿಸಿವೆ ಎಂದರು. ತಮ್ಮ ವಾತಜಾತಾ ಫಾರ್ಮಾ ಕಂಪನಿಯಿಂದ ಎಲ್ಲರಿಗೂ ಹ್ಯಾಂಡ್‌ವಾಶ್ ಲಿಕ್ವಿಡ್ ಉಚಿತವಾಗಿ ವಿತರಿಸಿದರು.

ನಿಯೋಜಿತ ರಾಷ್ಟ್ರೀಯ ತರಬೇತುದಾರ ಗಣೇಶ ಭಟ್, ೨೦೨೩ರಲ್ಲಿ ಜಗತ್ತಿನಾದ್ಯಂತ ಸುಮಾರು ೬೪೬ ಮಿಲಿಯನ್ ಶಾಲಾ ಮಕ್ಕಳಿಗೆ ಶಾಲೆಯಲ್ಲಿ ನೀರು ಮತ್ತು ಸಾಬೂನಿನೊಂದಿಗೆ ಮೂಲಭೂತ ಕೈತೊಳೆಯುವ ಸೌಲಭ್ಯವಿರಲಿಲ್ಲ ಎಂಬುದನ್ನು ಯುನಿಸೆಫ್ ವರದಿ ಮಾಡಿದೆ ಎಂದರು.

ಕಾರ್ಯದರ್ಶಿ ಎನ್.ಆರ್. ಗಜು ಮಾತನಾಡಿ, ಕೈಗಳಲ್ಲಿ ಬರಿಗಣ್ಣಿಗೆ ಕಾಣದ ಅಸಂಖ್ಯ ಜೀವಾಣುಗಳು ಆಹಾರ, ಕಣ್ಣು, ಮೂಗು ಹಾಗೂ ಬಾಯಿಯ ಮೂಲಕ ದೇಹ ಪ್ರವೇಶಿಸಿ ಹಲವಾರು ಬಗೆಯಲ್ಲಿ ಸೋಂಕು ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸಾಬೂನು ಮತ್ತು ನೀರಿನಿಂದ ಸರಿಯಾದ ವಿಧಾನದಲ್ಲಿ ಕೈ ತೊಳೆಯುವುದರಿಂದ ಈ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ತಾರಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಗಜಾನನ ಎಂ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಮದಾಸ ಗುನಗಿ, ಕೈತೊಳೆಯುವ ವಿಧಾನದ ವಿವಿಧ ಹಂತಗಳ ಮಾದರಿ ಚಿತ್ರಪಟ ಮಕ್ಕಳಿಗೆ ವಿತರಿಸಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಕೈತೊಳೆಯುವ ಸರಿಯಾದ ವಿಧಾನವನ್ನು ಪ್ರಾಯೋಗಿಕವಾಗಿ ಕಲಿತರು. ಮುಖ್ಯಶಿಕ್ಷಕಿ ಶೈಲಾ ಗುನಗಿ ಸ್ವಾಗತಿಸಿದರು. ಶಿಕ್ಷಕಿಯರಾದ ಮಂಗಲಾ ನಾಯಕ, ನವ್ಯಾ ನಾಯ್ಕ ಹಾಗೂ ಸ್ವಾತಿ ಗೌಡ ನಿರ್ವಹಿಸಿದರು.