ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಬೋಧನೆ

| Published : Jun 20 2024, 01:03 AM IST

ಸಾರಾಂಶ

ಚಿತ್ರದುರ್ಗದಲ್ಲಿ ವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ವಿಜ್ಞಾನ ಕಿಟ್ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ವಿತರಿಸಿದರು.

ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಆಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೋಧನೆ ಸಿಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಅಭಿಪ್ರಾಯ ಪಟ್ಟರು.

ಐಎಲ್.ಪಿ ಹಾಗೂ ಎಲುಷಿಯನ್ ಮತ್ತು ಸಿಎಸ್.ಆರ್ ಪಾಲುದಾರಿಕೆಯಲ್ಲಿ ಸರ್ಕಾರಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಬಿಆರ್‌ಸಿ ಕೇಂದ್ರದಲ್ಲಿ ತಾಲೂಕಿನ 200 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ವಿಜ್ಞಾನ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಹಾಗೂ ದಾಖಲಾತಿ ಕಡಿಮೆಯಿದೆ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಮೂರು ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನೇಮಕಗೊಳ್ಳುತ್ತಾರೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಬೋಧನೆ ದೊರೆಯುತ್ತದೆ. ಇದರ ಜೊತೆ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ವಿಜ್ಞಾನವನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ಮನ ಮುಟ್ಟುವಂತೆ ಬೋಧಿಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು.

ವಿಜ್ಞಾನ ಪರಿಕರಗಳನ್ನು ಬಳಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಮಕ್ಕಳಿಗೆ ಬೋಧಿಸಿದಾಗ ವಿಜ್ಞಾನದ ಬಗ್ಗೆ ಒಲವು ಹೆಚ್ಚಾಗಿ ಸಂಶೋಧನೆಗೆ ನೆರವಾಗಲಿದೆ. ವೈಜ್ಞಾನಿಕ ಮನೋಭಾವನೆ ಮಕ್ಕಳಲ್ಲಿ ಮೂಡಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಇಸ್ರೋ, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ವಿಜ್ಞಾನಿಗಳಾಗಬಹುದು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಸರ್ಕಾರಿ ಶಾಲಾ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬೋಧಿಸಿದರೆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದರು.

ಐಎಲ್.ಪಿ ಪ್ರಾಜೆಕ್ಟ್ ಮ್ಯಾನೇಜರ್ ಮಂಜುನಾಥ್ ಬೆಸ್ತರ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಿ ಪ್ರಾಯೋಗಿಕ ಚಟುವಟಿಕೆಗಳಿಗೆ ವಿಜ್ಞಾನ ಕಿಟ್‍ಗಳು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಇಂತಹ ಸೌಲಭ್ಯಗಳು ಕಡಿಮೆಯಿರುವುದರಿಂದ ಐಎಲ್.ಪಿ ಮತ್ತು ಎಲುಷಿಯನ್ ಸಂಸ್ಥೆಗಳು ನೀಡುವ ವಿಜ್ಞಾನ ಕಿಟ್‍ಗಳನ್ನು ಬಳಸಿ 6 ರಿಂದ 10 ನೇ ತರಗತಿಯ ಮಕ್ಕಳಿಗೆ ಪಠ್ಯಪುಸ್ತಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಬೋಧಿಸಬಹುದು ಎಂದು ತಿಳಿಸಿದರು.

ಈ ವೇಳೆ ಬಿಆರ್‌ಸಿ ಸಂಪತ್‍ಕುಮಾರ್, ಐಎಲ್‌ಪಿ ಪ್ರೋಗ್ರಾಮ್ ಮ್ಯಾನೇಜರ್ ಹರೀಶ್ ಕೆ. ಎಲುಷಿಯಾನ ಹಿರಿಯ ವ್ಯವಸ್ಥಾಪಕ ಶರತ್‍ಕುಮಾರ್, ಎಲುಷಿಯಾನ ಮಾಹಿತಿ ತಂತ್ರಜ್ಞಾನ ನಿರ್ದೇಶಕ ದಿವಾಕರಗುಪ್ತ ವೇದಿಕೆಯಲ್ಲಿದ್ದರು.