ಬೆಟ್ಟಿಂಗ್‌ ದಂಧೆ; ಸಾಲಬಾಧೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆ

| Published : Mar 21 2024, 01:00 AM IST

ಸಾರಾಂಶ

ಹೊಳಲ್ಕೆರೆ ನಗರದ ನಿವಾಸಿ ಇಂಜಿನಿಯರ್‌ ದರ್ಶನ್‌ ಐಪಿಎಲ್‌ ಬೆಟ್ಟಿಂಗ್‌ ವ್ಯಸನದಿಂದಾಗಿ ತೀವ್ರ ಸಾಲಬಾಧೆಗೆ ಒಳಗಾಗಿದ್ದ. ಸಾಲಗಾರರು ಆತನ ಪತ್ನಿಗೆ ಸಾಲ ತೀರಿಸುವಂತೆ ಕಿರುಕುಳ ನೀಡಿದ್ದನ್ನು ಸಹಿಸಲಾರದೆ ದರ್ಶನ್‌ ಪತ್ನಿ ರಂಜಿತಾ ಆತ್ಮಹತ್ಯಗೆ ಶರಣಾಗಿದ್ದಾರೆ.

ಹೊಳಲ್ಕೆರೆ: ಐಪಿಎಲ್‌ ಬೆಟ್ಟಿಂಗ್‌ ದಂಧೆಗೆ ಬಿದ್ದು ಸಾಲಗಾರನಾಗಿದ್ದ ಇಂಜಿನಿಯರ್‌ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಬಸವ ಲೇಔಟ್‌ನಲ್ಲಿ ನಡೆದಿದೆ.

ಹಣಕ್ಕೆ ಒತ್ತಾಯಿಸಿ ಪತಿಗೆ ಕಿರುಕುಳ ನೀಡುತ್ತಿದ್ದುದರಿಂದ ಬೇಸೆತ್ತು ರಂಜಿತಾ (೨೩) ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಂಜಿತಾ ಐದು ವರ್ಷಗಳ ಹಿಂದೆ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್‌ ಆಗಿದ್ದ ದರ್ಶನ್‌ ಬಾಲು ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗಳಿಗೆ ನಾಲ್ಕು ವರ್ಷದ ಗಂಡು ಮಗು ಇದೆ. ಸರ್ಕಾರಿ ಕೆಲಸ ಇದ್ದರೂ ಸಹ ಖಾಸಗಿಯಾಗಿ ಮೀಟರ್‌ ಬಡ್ಡಿ ಲೆಕ್ಕದಲ್ಲಿ ಒಂದು ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಸಾಲ ಕೊಟ್ಟವರು ಹಣಕ್ಕಾಗಿ ಮನೆಯ ಹತ್ತಿರ ಬಂದು ಪತಿ ಮತ್ತು ಪತ್ನಿ ಇಬ್ಬರನ್ನೂ ಪೀಡಿಸುತ್ತಿದ್ದರು. ಇದರಿಂದ ಬೇಸೆತ್ತ ಪತ್ನಿ ರಂಜಿತಾ ನಿನ್ನೆ ಸಂಜೆ ಸಾವಿಗೆ ಶರಣಾಗಿದ್ದಾರೆ. ನನ್ನ ಪತ್ನಿ ಸಾವಿಗೆ ಸಾಲ ಕೊಟ್ಟವರೇ ಕಾರಣ ಎಂದು ಪತಿ ದರ್ಶನ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಇಬ್ಬರ ಬಂಧನ: ಬೆಟ್ಟಿಂಗ್‌ ದಂಧೆಯ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರಂಜಿತಾ ಸಾವಿನ ಹಿನ್ನೆಲೆಯಲ್ಲಿ ಹೊಳಲ್ಕೆರೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಶಿವು ಮತ್ತು ಗಿರೀಶ್‌ ಬಂಧಿತ ಆರೋಪಿಗಳು. ಖಾಲಿ ಚೆಕ್‌ ಪಡೆದುಕೊಂಡು ದರ್ಶನ್‌ಗೆ ಸಾಲ ನೀಡಿದ್ದರು ಎಂದು ಹೇಳಲಾಗಿದೆ.