ಸಾರಾಂಶ
ನೀರಿನ ಬಕೆಟ್ ವಿಚಾರವಾಗಿ ಸಹದ್ಯೋಗಿಗಳ ನಡುವೆ ಜಳ ನಡೆದಿದ್ದು, ತಲೆ ಮೇಲೇ ಹಾಲೋ ಬ್ಲಾಕ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬುಧವಾರ ಇಂಡ್ಲವಾಡಿ ಸಮೀಪದ ಸಿದ್ದನಪಾಳ್ಯದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಆನೇಕಲ್
ನೀರಿನ ಬಕೆಟ್ ವಿಚಾರವಾಗಿ ಸಹದ್ಯೋಗಿಗಳ ನಡುವೆ ಜಳ ನಡೆದಿದ್ದು, ತಲೆ ಮೇಲೇ ಹಾಲೋ ಬ್ಲಾಕ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬುಧವಾರ ಇಂಡ್ಲವಾಡಿ ಸಮೀಪದ ಸಿದ್ದನಪಾಳ್ಯದಲ್ಲಿ ನಡೆದಿದೆ. ಬಿಹಾರ ಮೂಲದ ನಿತೀಶ್ ಕುಮಾರ್ ಕೊಲೆಯಾದ ಯುವಕ. ಜಾರ್ಖಂಡ್ ಮೂಲದ ಸೋಮನಾಥ್ ಕೊಲೆ ಆರೋಪಿ.ಇಂಡ್ಲವಾಡಿ ಸಮೀಪದ ಮದರ್ ಇಂಡಿಯಾ ಕಂಪನಿಯಲ್ಲಿ ಇಬ್ಬರು ಕಾರ್ಮಿಕರು ಉದ್ಯೋಗಿಗಳಾಗಿದ್ದು ಒಂದೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭಾನುವಾರ ಬಟ್ಟೆ ಒಗೆಯುವಾಗ ನೀರಿನ ಬಕೆಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು. ಕೈ ಕೈ ಮೀಲಾಯಿಸುವ ಹಂತ ತಲುಪಿತ್ತು. ಅಂದಿನಿಂದ ನಿತೀಶ್ ಕುಮಾರ್ ಮೇಲೆ ಕೆಂಡಕಾರುತ್ತಿದ್ದ ಸೋಮನಾಥ್ ಬುಧವಾರ ಬೆಳಗ್ಗೆ 2.30 ಸುಮಾರಿಗೆ ಮಲಗಿದ್ದ ನಿತೀಶ್ ತಲೆಯ ಮೇಲೆ ಹಾಲೋ ಬ್ಲಾಕ್ ಇಟ್ಟಿಗೆ ಎತ್ತಿಹಾಕಿದ್ದಾನೆ. ನೋವಿನಿಂದ ಬಳಲುತ್ತಿದ್ದ ನಿತೀಶ್ ಕುಮಾರ್ ಅವರನ್ನು ಅಕ್ಕ ಪಕ್ಕದ ಮನೆಯವರು ಆನೇಕಲ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಆರೋಪಿ ಸೋಮನಾಥನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.