ಮುನಿರಾಬಾದ್: ಬೇವಿನಹಳ್ಳಿ ಗ್ರಾಮಸ್ಥರು ಮಾಡುವ ನಿಸ್ವಾರ್ಥ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ನಗರಗಡ್ಡಿ ಮಠದ ಪೀಠಾಧಿಪತಿ ಶಿವಶಾಂತವೀರ ಸ್ವಾಮೀಜಿ ನುಡಿದರು.

ಬೇವಿನಹಳ್ಳಿ ಗ್ರಾಮದ ಮಾರುತೇಶ್ವರ ಜಾತ್ರೆ ನಿಮಿತ್ತ ಗ್ರಾಮಸ್ಥರಿಂದ ಆಯೋಜಿಸಲಾದ 18 ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕಳೆದ 22 ವರ್ಷಗಳಿಂದ ಬೇವಿನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಆಯೋಜಿಸಲ್ಪಡುವ ಶ್ರೀ ಮಾರುತೇಶ್ವರ ಸ್ವಾಮಿಯ ಜಾತ್ರೆ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕದ ಒಂದು ಪುಟ್ಟ ಗ್ರಾಮದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಣೆ, ನಿಸ್ವಾರ್ಥ ಭಾವದಿಂದ ಒಂದು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಾರುತೇಶ್ವರ ಜಾತ್ರೆಯ ಪ್ರಯುಕ್ತ ಮಾರುತೇಶ್ವರ ಸ್ವಾಮಿಗೆ ಅಭಿಷೇಕ, ಹೂವಿನಿಂದ ವಿಶೇಷ ಅಲಂಕಾರ ಮಾಡಲಾಯಿತು. ಅಲ್ಲದೆ ಕುಂಕುಮಾರ್ಚನೆ ಮಾಡಲಾಯಿತು.

ಮಧ್ಯಾಹ್ನ ನಗರಗಡ್ಡಿ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ ಹಾಗೂ ಹರ - ಗುರು - ಚರ ಶ್ರೀಗಳ ಸಾನ್ನಿಧ್ಯದಲ್ಲಿ ಸರ್ವ ಧರ್ಮದ 18 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ಬೇವಿನಹಳ್ಳಿ ಶ್ರೀ ಮಾರುತೇಶ್ವರ ಸ್ವಾಮಿ ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಲಿಂಗದಹಳ್ಳಿ, ಶಾಹಪುರ್, ಹಿಟ್ನಾಳ್ ಹಾಗೂ ಗಬ್ಬೂರು ಗ್ರಾಮಸ್ಥರು ಭಾಗಿಯಾಗಿ ಸೇವೆ ಸಲ್ಲಿಸುತ್ತಾರೆ. ಲಿಂಗದಹಳ್ಳಿ ಗ್ರಾಮದಿಂದ ರಥಕ್ಕೆ ಕಳಸ, ಶಾಹಾಪುರ್ ಗ್ರಾಮದಿಂದ ಅಲಂಕೃತಗೊಂಡ ವಸ್ತ್ರಗಳ ಸೇವೆ, ಹಿಟ್ನಾಳ ಗ್ರಾಮದಿಂದ ಶ್ರೀ ಮಾರುತೇಶ್ವರ ಸ್ವಾಮಿಯ ಬೆಳ್ಳಿ ಉತ್ಸವ ಮೂರ್ತಿ ಹಾಗೂ ಗಬ್ಬೂರು ಗ್ರಾಮದಿಂದ ರಥಕ್ಕೆ ಎಳೆಯುವ ಹಗ್ಗ ಪ್ರತಿ ವರ್ಷವೂ ಬರುತ್ತದೆ.

ಮಾರುತೇಶ್ವರ ಸ್ವಾಮಿ ಜಾತ್ರೆ ನಿಮಿತ್ತ ಸಂಜೆ ಬೇವಿನಹಳ್ಳಿ ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಯಿತು.