ಸಾರಾಂಶ
ಹೊಸಪೇಟೆ: ಡಾ.ಮಂಜುನಾಥ ಬೇವಿನಕಟ್ಟಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಿದ ಸೇವೆ ಅಮೋಘವಾದುದು ಎಂದು ಸಾಹಿತಿ, ಚಿಂತಕ ಡಾ.ರಾಜಪ್ಪ ದಳವಾಯಿ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸೇವಾ ಅವಧಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಹಲವು ಬಗೆಯ ವ್ಯಕ್ತಿ ವೈಶಿಷ್ಟ್ಯ, ವೈಪರೀತ್ಯಗಳಿರುತ್ತವೆ. ಇವುಗಳ ನಡುವೆ ಗುರು-ಶಿಷ್ಯರ ಸಂಬಂಧ ಗಟ್ಟಿಗೊಳ್ಳುವಲ್ಲಿ ಇಬ್ಬರ ನಡುವಿನ ಮನಸ್ಥಿತಿಗಳು ಮುಖ್ಯ ಎಂದು ಹೇಳಿದರು.
ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಡಾ.ಮಂಜುನಾಥ ಬೇವಿನಕಟ್ಟಿ ಪ್ರಾಧ್ಯಾಪಕರಾಗಿ, ಆಡಳಿತಾಂಗದಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವರು. ಇವರು ನಿವೃತ್ತರಾದರೂ ವಿಶ್ವವಿದ್ಯಾಲಯದೊಂದಿಗಿನ ಬಾಂಧವ್ಯ ನಿರಂತರವಾಗಿರಲಿ ಎಂದು ಆಶಿಸಿದರು.ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಮಾತನಾಡಿದರು.ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಸನ್ಮಾನ ಸ್ವೀಕರಿಸಿದರು.ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ.ಚಲುವರಾಜು, ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್, ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಗೀತಮ್ಮ ಕೆ., ಉಪಕುಲಸಚಿವ ಡಾ.ಎ. ವೆಂಕಟೇಶ, ಪ್ರಸಾರಾಂಗದ ಸಹಾಯಕ ಕುಲಸಚಿವ ಡಾ.ಎಂ.ಎಂ. ಶಿವಪ್ರಕಾಶ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.