ಸಾರಾಂಶ
ತಾಲೂಕು ಆಡಳಿತದಿಂದ ಮೆದುಳು ಜ್ವರ ನಿಯಂತ್ರಣ ಕಾರ್ಯಾಗಾರ
ಮಳವಳ್ಳಿ: ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮೆದುಳು ಜ್ವರದ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜು ಸಲಹೆ ನೀಡಿದರು.ಪಟ್ಟಣದ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಮೆದುಳು ಜ್ವರ ನಿಯಂತ್ರಣ ಮತ್ತು ಮುಂಜಾಗ್ರತೆ ಕುರಿತು ತಾಲೂಕು ಮಟ್ಟದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮೇಲ್ವಿಚಾರಕರ ಆಡ್ವೋಕೆಸಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಮೆದುಳು ಜ್ವರ ಮಾರಣಾಂತಿಕವಾಗಿದ್ದು, ಇದರ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆಯ ಜತೆಗೆ ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಮೆದುಳು ಜ್ವರದ ಪ್ರಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ ಸೇರಿದಂತೆ ಅನೇಕ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ತಿಳಿವಳಿಕೆ ನೀಡಿದರು.ಹಂದಿ, ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಮೆದುಳು ಜ್ವರ ನಿರೋಧಕ ಲಸಿಕೆಯನ್ನು ಕೊಡಿಸಬೇಕು. ಮುನ್ನೆಚ್ಚರಿಕೆಗಾಗಿ ಹಂದಿಗಳನ್ನು ಜನರ ವಾಸ ಸ್ಥಳದಿಂದ ಮೂರು ಕಿಲೋ ಮೀಟರ್ ದೂರಕ್ಕೆ ಸ್ಥಳಾಂತರ ಮಾಡಬೇಕು. ನೀರು ನಿಂತ ಸ್ಥಳಗಳಲ್ಲಿ ಲಾರ್ವಾಹಾರಿ ಮೀನು ಬಿಡುವುದು. ಮನೆಗಳಲ್ಲಿ ತಪ್ಪದೇ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು ಸೇರಿದಂತೆ ಆರೋಗ್ಯ ಇಲಾಖೆಯ ಅನೇಕ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ತಾಲೂಕು ಪಂಚಾಯತಿ ಯೋಜನಾಧಿಕಾರಿ ದೀಪು, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ರಾಜಸ್ವ ನಿರೀಕ್ಷಕ ಚೇತನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.