ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಪುರಸಭೆಯಲ್ಲಿ ಈ ಖಾತೆ ಪ್ರಾರಂಭವಾಗಿದೆ ಎ ಮತ್ತು ಬಿ ಖಾತೆ ಮಾಡಿಸಲು ಹಾಗೂ ಬ್ಯಾಂಕಿಗೆ ಕಂದಾಯ ಅಥವಾ ಶುಲ್ಕ ಪಾವತಿಸಲು ದಲ್ಲಾಳಿಗಳು ಅಥವಾ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬೇಡಿ ನೇರವಾಗಿ ಪುರಸಭಾ ಅಥವಾ ಬ್ಯಾಂಕಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ವ್ಯವಹರಿಸಬೇಕೆಂದು ಮುಖ್ಯ ಅಧಿಕಾರಿ ಮಂಜುಳಾ ತಿಳಿಸಿದ್ದಾರೆ. ಪಟ್ಟಣದ ಪುರಸಭಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ ಮತ್ತು ಬಿ ಖಾತೆಗೆ ಸಂಬಂಧಿಸಿದಂತೆ ಹಲವಾರು ಗ್ರಾಹಕರುಗಳಿಗೆ ಮತ್ತು ಖಾತೆ ದಾರರಿಗೆ ಕುಣಿಗಲ್ ಪಟ್ಟಣದ ವಾಸಿ ಕೃಷ್ಣ ಅಲಿಯಾಸ್ ಕಿಟ್ಟಿ ಎಂಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಕೆನರಾ ಬ್ಯಾಂಕಿನ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚನೆ ಮಾಡಿರುವ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿ ಕೃಷ್ಣ , ಸೀಲು ತಯಾರಿಸಿದ ರಾಜೇಂದ್ರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪುರಸಭಾ ಸದಸ್ಯರೊರ್ವರ ಹಾಗೂ ಹಲವಾರು ಮಂದಿಯ ಹಣವನ್ನು ನಕಲಿ ಸೀಲು ಮತ್ತು ಸಹಿಯಿಂದ ಲಪಟಾಯಿಸಿ ಲಕ್ಷಾಂತರ ರುಪಾಯಿಗಳನ್ನು ವಂಚಿಸಿರುವ ಸಂಬಂಧ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಶೇಷ ತನಿಖಾ ತಂಡವನ್ನು ಪುರಸಭೆಗೆ ಕಳುಹಿಸಿ ಬ್ಯಾಂಕ್ ವ್ಯವಹಾರ ಮತ್ತು ಪುರಸಭಾ ಏ ಖಾತೆ ಬಿ ಖಾತೆಗಳ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ. ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿ ನೀಡಿದ್ದು ಬ್ಯಾಂಕ್ ವತಿಯಿಂದ ದೂರು ನೀಡಲಾಗುತ್ತಿದೆ. ಸಾರ್ವಜನಿಕರು ಮುಂದಿನ ದಿನಗಳಲ್ಲಿ ತಮ್ಮ ವ್ಯವಹಾರಗಳನ್ನು ನೇರವಾಗಿ ಅಧಿಕಾರಿಗಳ ಜೊತೆ ಮಾಡುವಂತೆ ಮನವಿ ಮಾಡಿದರು ಪುರಸಭೆಗೆ 20 ಲಕ್ಷಕ್ಕಿಂತ ಹೆಚ್ಚು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು ಕೆನರಾ ಬ್ಯಾಂಕ್ ನ ನಕಲಿ ಸೀಲು ಮತ್ತು ಸಹಿ ಮಾಡಿರುವ ದಂಧೆ ಹಲವು ವರ್ಷದಿಂದ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇಷ್ಟೆಲ್ಲಾ ಘಟನೆ ನಡೆದು ಮಾಧ್ಯಮದಲ್ಲಿ ವರದಿ ಆಗಿದ್ದರೂ ಕೂಡ ಕೆನರಾ ಬ್ಯಾಂಕ್ ನಿಂದ ಇದುವರೆಗೂ ದೂರು ದಾಖಲಾಗಿಲ್ಲ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಅಲ್ಲಿಂದ ವರದಿ ಬಂದ ನಂತರ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಬಾಕ್ಸ್..
ಪುರಸಭಾ ಸದಸ್ಯನಿಗೆ ಮೋಸ :-ಪುರಸಭಾ ಸದಸ್ಯ ಶ್ರೀನಿವಾಸ್ ಅವರ ತಮ್ಮ ಪಾಲಿನ 18ಕ್ಕಿಂತ ಹೆಚ್ಚು ಆಸ್ತಿಗಳ ಸಂಬಂಧ 60, 433 ರು.ಗಳನ್ನು ನಕಲಿ ಸೀಲು ಸೃಷ್ಟಿಸಿದ ಕೃಷ್ಣ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಶ್ರೀನಿವಾಸ ಆರೋಪಿಸಿದ್ದು ದಲ್ಲಾಳಿಗಳಿಂದ ಪ್ರತಿಯೊಬ್ಬರು ಜಾಗರೂಕತೆ ವಹಿಸಬೇಕೆಂದು ಹಾಗೂ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಸರಿಯಾದ ದಂಡ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಈ ಮಂಜು ಅರುಣ್ ಸೇರಿದಂತೆ ಇತರರು ಇದ್ದರು.