ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆನೆಕಾಲು ರೋಗ ಬರುವ ಮುನ್ನ ಮುಂಜಾಗ್ರತೆ ಕ್ರಮ ವಹಿಸುವುದು ಅತ್ಯವಶ್ಯಕ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಟಿ.ಜೆ.ತಾರ ಹೇಳಿದರು.ತಾಲೂಕಿನ ಟಿ.ಎಂ ಹೊಸೂರು ಆಯುಷ್ಮಾನ್ ಆರೋಗ್ಯ ಮಂದಿರ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ರಾತ್ರಿ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಆನೆಕಾಲು ರೋಗವು ಒಂದು ಪರಾವಲಂಬಿ ಸೂಕ್ಷ್ಮಾಣು ಜೀವಿಯಿಂದ ಬರುವ ಕಾಯಿಲೆ. ಇದು ಸೋಂಕು ಹೊಂದಿದ ಕ್ಯೂಲೆಕ್ಸ ಜಾತಿಗೆ ಸೇರಿದ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಮಾತನಾಡಿ, ಆನೆಕಾಲು ರೋಗವನ್ನು 2027ಕ್ಕೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಆರೋಗ್ಯ ಇಲಾಖೆ ವಲಸೆ ಕಾರ್ಮಿಕರಿಗೆ ನಿರಂತರವಾಗಿ ರಾತ್ರಿ ರಕ್ತ ಲೇಪನ ಸಂಗ್ರಹ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಟಿ.ಎಂ ಹೊಸೂರು ಪಂಚಾಯತ್ ವ್ಯಾಪ್ತಿಯಲ್ಲಿ 202 ಜನರಿಗೆ ರಕ್ತ ಲೇಪನ ಸಂಗ್ರಹಿಸಿದ್ದು ಇದರಲ್ಲಿ ಇಬ್ಬರು ವಲಸೆ ಕಾರ್ಮಿಕರಿಗೆ ಆನೆಕಾಲು ರೋಗ ಪತ್ತೆಯಾಗಿದೆ. ಅವರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ರೋಗ ಪ್ರಾರಂಭದ ಹಂತದಲ್ಲಿ ಕಂಡುಹಿಡಿದಿದ್ದರಿಂದ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ ಎಂದರು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್ ಮಾತನಾಡಿ, ಟಿ.ಎಂ ಹೊಸೂರು ಸುತ್ತ ಮುತ್ತಲಿನ ಕ್ವಾರಿ ಕೆಲಸಕ್ಕಾಗಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಯಿಂದ ವಲಸೆ ಜನಾಂಗದವರಲ್ಲಿ ಈ ಕಾಯಿಲೆ ಕಂಡುಬಂದಿದ್ದರಿಂದ ಟಿ.ಎಂ ಹೊಸೂರು ಗ್ರಾಮದಲ್ಲಿ ಅ.29 ರಂದು ರಾತ್ರಿ 8.30 ರ ನಂತರ 20 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಕಕ್ತ ಲೇಪನ ಸಂಗ್ರಹಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದೆ. ದಕ್ಕಾಗಿ ಸಾರ್ವಜನಿಕರು ರಾತ್ರಿ ರಕ್ತ ಲೇಪನ ಸಂಗ್ರಹಣ ಕಾರ್ಯಕ್ಕೆ ರೋಗ ನಿರ್ಮೂಲನೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷೆ ಶಾಂತಮ್ಮ, ಪಿಡಿಓ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ್, ಸಮುದಾಯ ಆರೋಗ್ಯ ಅಧಿಕಾರಿಗಳು, ಸ್ವಸಹಾಯ ಸಂಘದ ಪದಾಧಿಕಾರಿ ಮಾನಸ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಇದ್ದರು.