ಸಂಚಾರ ಪೊಲೀಸರ ಹೆಸರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿ ನಕಲಿ ಕರೆಗಳ ಬಗ್ಗೆ ಜಾಗೃತೆ ವಹಿಸಿ: ಅನುಚೇತ್‌

| Published : Nov 22 2024, 01:17 AM IST / Updated: Nov 22 2024, 07:15 AM IST

smartphone
ಸಂಚಾರ ಪೊಲೀಸರ ಹೆಸರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿ ನಕಲಿ ಕರೆಗಳ ಬಗ್ಗೆ ಜಾಗೃತೆ ವಹಿಸಿ: ಅನುಚೇತ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ಪೊಲೀಸರ ಹೆಸರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ದಂಡ ವಸೂಲಿ ಕುರಿತು ಬರುವ ಸಂದೇಶ ಅಥವಾ ಕರೆಗಳ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸುವಂತೆ ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಮನವಿ ಮಾಡಿದ್ದಾರೆ.

 ಬೆಂಗಳೂರು : ಸಂಚಾರ ಪೊಲೀಸರ ಹೆಸರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ದಂಡ ವಸೂಲಿ ಕುರಿತು ಬರುವ ಸಂದೇಶ ಅಥವಾ ಕರೆಗಳ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸುವಂತೆ ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಮನವಿ ಮಾಡಿದ್ದಾರೆ.

ಈತ್ತಿಚೆಗೆ ನಗರ ಸಂಚಾರ ಪೊಲೀಸ್‌ ಎಂದು ಹೇಳಿಕೊಳ್ಳುವ ನಕಲಿ ವ್ಯಕ್ತಿಗಳಿಂದ ಕರೆಗಳು ಮತ್ತು ಸಂದೇಶಗಳ ಬಗ್ಗೆ ಹಲವು ದೂರುಗಳು ಬಂದಿವೆ. ಈ ರೀತಿ ಕರೆಗಳು ಮತ್ತು ಸಂದೇಶಗಳು ನಾಗರಿಕರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ದೋಚಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.  

ನಾಗರಿಕರಿಗೆ ಜಂಟಿ ಆಯುಕ್ತರ ಸಲಹೆಗಳು:

ಸಂಚಾರ ಪೊಲೀಸರ ಹೆಸರಿನಲ್ಲಿ ಬರುವ ಕರೆಗಳು ಹಾಗೂ ಅಥವಾ ಸಂದೇಶಗಳಿಗೆ ಜನರು ಪ್ರತಿಕ್ರಿಯಿಸಬಾರದು. ತಮ್ಮ ಮೊಬೈಲ್‌ಗೆ ಬರುವ ಈ ರೀತಿಯ ಲಿಂಕ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ ಎಂದು ಜಂಟಿ ಆಯುಕ್ತರು ಸೂಚಿಸಿದ್ದಾರೆ. ಈ ಮಾದರಿಯ ಕರೆಗಳು ಅಥವಾ ಸಂದೇಶಗಳು ಬಂದರೆ ಕೂಡಲೇ ಪೊಲೀಸ್‌ ಇಲಾಖೆಯನ್ನು ಸಂಪರ್ಕಿಸಿ ಅವುಗಳ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು ಹಾಗೂ ಹಣ ಪಾವತಿಸುವುದು ಮಾಡಬಾರದೆಂದು ಸಲಹೆ ನೀಡಿದ್ದಾರೆ.

ಶಂಕಾಸ್ಪದ ಸಂದೇಶಗಳ ಬಗ್ಗೆ ದೂರು ನೀಡಿ

ಸುಳ್ಳು ಅಥವಾ ನಕಲಿ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸಿದರೆ ಕೂಡಲೇ ಸಂಚಾರ ಪೊಲೀಸರ ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿ (080-22868550/22868444) ಕರೆ ಮಾಡಿ ದೂರು ದಾಖಲಿಸುವಂತೆ ಜಂಟಿ ಆಯುಕ್ತರು ಕೋರಿದ್ದಾರೆ. ಅಲ್ಲದೆ ಈ ಬಗ್ಗೆ ಇಮೇಲ್‌ಗೆ acpplanningoffice@gmail.com ಮೂಲಕ ಸಹ ದೂರು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಯಾವ ರೀತಿಯ ಕರೆಗಳು?

* ನಕಲಿ ದಂಡ, ದಂಡವನ್ನು ಪಾವತಿಸುವಂತೆ ಕೋರಿ ಸಂಚಾರ ಪೊಲೀಸ್‌ ಇಲಾಖೆಯಿಂದ ಎಂದು ಹೇಳಿಕೊಳ್ಳುವ ಕರೆಗಳು.

* ಸಂಚಾರ ನಿಯಮ ಉಲ್ಲಂಘನೆಗಳ ತುಣುಕನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಮತ್ತು ಪಾವತಿಗೆ ಒತ್ತಾಯಿಸುವ ಸಂದೇಶಗಳು.

* ನಕಲಿ ವಿಮೆ ಅಥವಾ ನೋಂದಣಿ ಸೇವೆಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಕರೆಗಳು.

*ದುರುದ್ದೇಶಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಲು ಅಥವಾ ಲಗತ್ತುಗಳನ್ನು ಡೌನ್‌ಲೋಡ್‌ ಮಾಡಲು ನಾಗರಿಕರನ್ನು ಕೇಳುವ ಸಂದೇಶಗಳು. ವಾಹನವು ಹಿಟ್ & ರನ್ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ತಿಳಿಸುವುದು.

*ವಂಚಕನು ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ಕರೆಯನ್ನು ಪೊಲೀಸ್ (ನಕಲಿ) ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿಕೊಳ್ಳುವ ಅಥವಾ ಪಾವತಿಯನ್ನು ದೃಢೀಕರಿಸಲು ನಿಮ್ಮ ಫೋನ್‌ನಿಂದ 1,2, ಇತ್ಯಾದಿ ಸಂಖ್ಯೆಗಳನ್ನು ಒತ್ತಲು ಕೇಳುವ ಕರೆಗಳು.