ವಸತಿ ವ್ಯವಸ್ಥೆಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಶಾಸಕ ಪಿ.ರವಿಕುಮಾರ್ ಸೂಚನೆ

| Published : Oct 27 2024, 02:01 AM IST

ವಸತಿ ವ್ಯವಸ್ಥೆಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಶಾಸಕ ಪಿ.ರವಿಕುಮಾರ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಸಮಿತಿಗೆ ಎರಡು ಕೋಟಿ ರು. ಬಜೆಟ್ ನೀಡಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ಉಸ್ತುವಾರಿ ಸಚಿವರು ಮತ್ತು ಸ್ವಾಗತ ಸಮಿತಿಯೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ಡಿ.೨೦, ೨೧, ೨೨ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ವಸತಿ ವ್ಯವಸ್ಥೆ ಮಾಡುವುದರ ಜೊತೆಗೆ ಯಾವುದೇ ಲೋಪವುಂಟಾಗದಂತೆ ಎಚ್ಚರಿಕೆ ವಹಿಸಲು ಶಾಸಕ ಪಿ. ರವಿಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮ್ಮೇಳನದ ವಸತಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿ, ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಉಪ ಸಮಿತಿಗಳನ್ನು ರಚಿಸುವುದರ ಜೊತೆಗೆ ಕಲಾವಿದರು, ವಿದೇಶಿ ಗಣ್ಯರು, ಅತಿಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ವಸತಿ ಸೌಲಭ್ಯಗಳಲ್ಲಿ ಲೋಪವಾಗದಂತೆ ಎಚ್ಚರ ವಹಿಸುವುದು ಹಾಗೂ ಸಮರೋಪಾದಿಯಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ಉದ್ದೇಶದಿಂದ ಉಪ ಸಮಿತಿಗಳನ್ನು ರಚಿಸಲಾಗಿದೆ. ವಸತಿ ಶಾಲೆಗಳ ಸಮಿತಿ, ಹೊಟೇಲ್‌ಗಳ ಸಮಿತಿ, ಸಾರಿಗೆ ಸಮಿತಿ, ಕಲ್ಯಾಣ ಮಂಟಪ ಸಮಿತಿ, ಗಣ್ಯಾತಿ ಗಣ್ಯರ ಸಮಿತಿ, ಕಲಾವಿದರ ಸಮಿತಿ, ಮನೆ ಅತಿಥಿ ಸಮಿತಿ, ವಿದೇಶಿ ಗಣ್ಯರ ಸಮಿತಿ, ನೋಂದಣಿ ಸಮಿತಿ, ಪ್ರತಿನಿಧಿಗಳ ಸಮಿತಿಗಳನ್ನು ರಚಿಸಿ ಒಂದು ವಾರದೊಳಗೆ ಸಭೆಗೆ ತಿಳಿಸುವುದರ ಜೊತೆಗೆ ಆಸಕ್ತಿಯಿಂದ ಕೆಲಸ ಮಾಡುವವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು.

ವಸತಿ ಸಮಿತಿಗೆ ಎರಡು ಕೋಟಿ ರು. ಬಜೆಟ್ ನೀಡಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ಉಸ್ತುವಾರಿ ಸಚಿವರು ಮತ್ತು ಸ್ವಾಗತ ಸಮಿತಿಯೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನವನ್ನು ಎಲ್ಲಾ ಸಮಿತಿಗಳು ಒಟ್ಟುಗೂಡಿ ಯಶಸ್ವಿಗೊಳಿಸುವುದಕ್ಕೆ ತಾವು ಸಹಕಾರ ಮಾಡಬೇಕೆಂದು ಕೋರಿದರು.

ಉಪ ವಿಭಾಗಾಧಿಕಾರಿ ಶಿವಮೂರ್ತಿ, ಕಸಾಪ ಪದಾಧಿಕಾರಿಗಳಾದ ಡಾ.ಹುಸ್ಕೂರು ಕೃಷ್ಣಮೂರ್ತಿ, ಅಪ್ಪಾಜಪ್ಪ, ಮಾಧ್ಯಮ ಸಂಯೋಜಕ ಎಲ್.ಕೃಷ್ಣ, ಅಂಜನಾ, ಪೂರ್ಣಚಂದ್ರ, ಸುನಿಲ್, ಅಶೋಕ್, ಅಭಿಲಾಷ್, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಸುಜಾತ ಕೃಷ್ಣ, ವಸತಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.