ಮಂಗನ ಕಾಯಿಲೆ ಕುರಿತು ಎಚ್ಚರಿಕೆ ಇರಲಿ: ಪ್ರವೀಣ್

| Published : Mar 08 2024, 01:52 AM IST

ಸಾರಾಂಶ

ಸಾರ್ವಜನಿಕರಲ್ಲಿ ಯಾರಿಗಾದರೂ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾರ್ವಜನಿಕರಲ್ಲಿ ಯಾರಿಗಾದರೂ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಹೇಳಿದರು.

ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಮಂಗನ ಕಾಯಿಲೆ ಕುರಿತು ಮುಂಜಾಗ್ರತಾ ಸಭೆ ಹಾಗೂ ಮಾಹಿತಿ ಶಿಬಿರದಲ್ಲಿ ಮಾತನಾಡಿ, ಕುಟುಂಬದಲ್ಲಿ ಯಾರಿಗಾದರೂ ನಿರಂತರ ಶೀತ, ಜ್ವರ, ಕೆಮ್ಮು, ಸುಸ್ತು ಹಾಗೂ ತಲೆ ನೋವು ಕಂಡುಬಂದರೆ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಮಂಗಗಳು ಸಾವನ್ನಪ್ಪಿರುವುದು ಕಂಡು ಬಂದರೆ ಸ್ಥಳೀಯ ಆರೋಗ್ಯ ಕೇಂದ್ರ, ಗ್ರಾಪಂತಿಗೆ ಮಾಹಿತಿ ನೀಡಬೇಕು. ಅರಣ್ಯ ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವಾಗ ಆರೋಗ್ಯ ಇಲಾಖೆಯಿಂದ ನೀಡುವ ಡಿಇಪಿಇ (ಉಣ್ಣೆ ವಿಕರ್ಷಕ) ತೈಲ ಲೇಪಿಸಿಕೊಳ್ಳಬೇಕು. ಕೆಲಸ ಮುಗಿಸಿದ ನಂತರ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆ ಹಾಕಿ ತೊಳೆಯ ಬೇಕು.

ಮನೆಯ ಸುತ್ತಮುತ್ತ ಕಾಡಿನಿಂದ ಒಣಗಿದ ಎಲೆಗಳನ್ನು ತಂದು ಹಾಕಬಾರದು. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿದರೆ ಕೆಎಫ್.ಡಿ.ಸೋಂಕನ್ನು ನಿಯಂತ್ರಣಕ್ಕೆ ತರಬಹುದು. ಕಾಯಿಲೆ ಹತೋಟಿಗೆ ಆರೋಗ್ಯ ಇಲಾಖೆ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸ ಬೇಕು. ರೋಗದ ಕುರಿತು ಎಚ್ಚರಿಕೆ ವಹಿಸಬೇಕು. ಯಾವುದೇ ಭಯ ಬೇಡ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಎಂ.ಎಸ್.ಅರುಣೇಶ್, ಮಹಮ್ಮದ್ ಜುಹೇಬ್, ಇಬ್ರಾಹಿಂ ಶಾಫಿ, ಉಪ ವಲಯ ಅರಣ್ಯಾಧಿಕಾರಿ ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮತ್ತಿತರರು ಹಾಜರಿದ್ದರು.೦೭ಬಿಹೆಚ್‌ಆರ್ ೫: ಬಾಳೆಹೊನ್ನೂರಿನಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಮಂಗನ ಕಾಯಿಲೆಯ ಮುಂಜಾಗ್ರತಾ ಸಭೆಯಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಮಾತನಾಡಿದರು. ಸದಾಶಿವ ಆಚಾರ್ಯ, ರಂಜಿತಾ, ಅರುಣೇಶ್, ಜುಹೇಬ್, ಇಬ್ರಾಹಿಂ ಶಾಫಿ ಇದ್ದರು.