ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಅತ್ಯಂತ ವಿಸ್ತಾರವಾದ ಜಿಲ್ಲೆಯಲ್ಲಿ ಒಂದಾಗಿದ್ದು, ಅರಣ್ಯ ಮತ್ತು ಸಮುದ್ರದಿಂದ ಕೂಡಿದೆ. ಜಿಲ್ಲೆಯಲ್ಲಿ ವಿಭಿನ್ನ ಸಮಸ್ಯೆಗಳಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ದುರ್ಘಟನೆಗಳು ನಡೆಯದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಸಂಬಂಧಿತ ಸಮಸ್ಯೆಗಳು ಅಧಿಕವಾಗಿದ್ದು, ಇವುಗಳಿಗೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಲು ಕಷ್ಟವಾಗಿದ್ದು, ಕಂದಾಯ ಇಲಾಖೆಯ ಮೂಲಕ ಸಾಧ್ಯವಿರುವ ಎಲ್ಲ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುವುದರ ಮೂಲಕ ಸಾರ್ವಜನಿಕರಿಗೆ ನೆರವು ಒದಗಿಸುವಂತೆ ತಿಳಿಸಿದ ಸಚಿವರು, ಇತ್ತೀಚೆಗೆ ಅತಿವೃಷ್ಟಿಯಿಂದ ಸಂಭವಿಸಿದ ಅನಾಹುತಗಳನ್ನು ಜಿಲ್ಲಾಡಳಿತ ನಿರ್ವಹಿಸಿದ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದರು.ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕುರಿತಂತೆ, ಈ ಕ್ಷೇತ್ರದಲ್ಲಿ ನುರಿತ ತಜ್ಞರ ನೆರವು ಪಡೆದುಕೊಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಹಾಗೂ ನೌಕಾನೆಲೆಯ ಪತಂಜಲಿ ಆಸ್ಪತ್ರೆ ಬಳಿ ಅಪೂರ್ಣವಾಗಿರುವ ರಸ್ತೆ ಕಾಮಗಾರಿ ಸೇರಿದಂತೆ ಹೆದ್ದಾರಿಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಯನ್ನು ಶೀಘ್ರದಲ್ಲಿ ಸಂಪೂರ್ಣವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಪಹಣಿಗೆ(ಆರ್‌ಟಿಸಿ) ಆಧಾರ್ ಜೋಡಣೆ ಮಾಡುವ ಆಧಾರ್ ಸೀಡಿಂಗ್ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಸರ್ಕಾರಿ ಜಾಗದ ಸಂರಕ್ಷಣೆಗಾಗಿ ರೂಪಿಸಿರುವ ಲ್ಯಾಂಡ್ ಬೀಟ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಬಗರ್‌ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಪೋಡಿ ಮುಕ್ತ ಆಭಿಯಾನ ಮತ್ತು ಪೌತಿ ಖಾತೆ ಆಂದೋಲನದ ಮೂಲಕ ಜಮೀನುಗಳ ಖಾತೆಗಳನ್ನು ಸಂಪೂರ್ಣ ವಿವಾದರಹಿತವಾಗಿ ವಾರಸುದಾರರಿಗೆ ದೊರಕಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಬೇಕು. ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲ ಕಚೇರಿಗಳಲ್ಲಿ ಇ- ಆಫೀಸ್ ತಂತ್ರಾಂಶವನ್ನು ಕಡ್ಡಾಯವಾಗಿ ಅಳವಡಿಸಿ ಆ ಮೂಲಕವೇ ಎಲ್ಲ ಕಡತಗಳ ನಿರ್ವಹಣೆ ಮಾಡಬೇಕು ಎಂದರು.ಇದೇ ವೇಳೆ ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಸಚಿವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಎಂ. ಇದ್ದರು.