ಸಾರಾಂಶ
ಹೊರಗಿನಿಂದ ಬಂದು ಕಳ್ಳತನ, ದರೋಡೆ ನಡೆಸುತ್ತಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ನಾನು ಸಹ ನಿತ್ಯ ವರದಿ ನೀಡುವಂತೆ ಸೂಚಿಸಿದ್ದೇನೆ. ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ಬಂದು ಹೋದ ಬಳಿಕ ಕಳ್ಳರು ಕೃತ್ಯವೆಸಗುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಸ್ವಲ್ಪ ಎಚ್ಚರ ವಹಿಸಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನ, ದರೋಡೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸಹ ಎಚ್ಚರವಹಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಯಾತನಹಳ್ಳಿ ಸಮೀಪದ ಒಂಟಿ ಮನೆ ಮೇಲೆ ದರೋಡೆ ನಡೆಸಲು ಹೋಗಿ ಮನೆ ಮಾಲೀಕನನ್ನು ಭೀಕರವಾಗಿ ಹತ್ಯೆಗೊಳಿಸಿದ್ದಾನೆ. ಪಟ್ಟಣದಲ್ಲಿ ಮಧ್ಯಾಹದ ವೇಳೆ ಬೈಕ್ ಕಳ್ಳತನ ಮಾಡಲು ಪ್ರಯತ್ನಿಸಿದ್ದಾನೆ. ಜತೆಗೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದರು.
ಹೊರಗಿನಿಂದ ಬಂದು ಕಳ್ಳತನ, ದರೋಡೆ ನಡೆಸುತ್ತಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ನಾನು ಸಹ ನಿತ್ಯ ವರದಿ ನೀಡುವಂತೆ ಸೂಚಿಸಿದ್ದೇನೆ. ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ಬಂದು ಹೋದ ಬಳಿಕ ಕಳ್ಳರು ಕೃತ್ಯವೆಸಗುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಸ್ವಲ್ಪ ಎಚ್ಚರ ವಹಿಸಬೇಕು ಎಂದು ಕಿವಮಾತು ಹೇಳಿದರು.ಮನೆಗಳ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡು ಮಲಗಬೇಕು. ಅಪರಿಚತರು ಮನೆಗಳಿಗೆ ಬಂದಾಗ ಬಾಗಿಲು ತೆರೆಯಬಾರದು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಮನವಿ ಮಾಡಲಾಗಿದೆ. ಜತೆಗೆ ಉಪ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತಿದೆ ಎಂದರು.