ಸಾರಾಂಶ
ಜನಪರ ಚಿಂತಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳುತ್ತಿದ್ದಾರೆ । ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸರ್ವ ಸದಸ್ಯರ ಮಹಾಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದಲಿತ ಚಳುವಳಿಗಳ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಎಚ್ಚರವಹಿಸಿ, ಆರೋಗ್ಯಕರ ರಚನಾತ್ಮಕ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಚಳುವಳಿಗಳನ್ನು ಸುಭದ್ರವಾಗಿ ಕಟ್ಟಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಚಳುವಳಿಗಳು ವೈಚಾರಿಕತೆ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ದೂರಗಾಮಿ ನೀತಿಯನ್ನು ಅರಿಯಬೇಕಿದೆ. ಇದಿಲ್ಲದಿದ್ದರೇ ಚಳುವಳಿಗಳು ಹಿನ್ನಡೆ ಅನುಭವಿಸುತ್ತವೆ ಎಂದು ಕಿವಿ ಮಾತು ಹೇಳಿದರು.ಸಾಮಾಜಿಕ ಜಾಲತಾಣಗಳಲ್ಲಿ ದಲಿತ ಚಳುವಳಿಗಳನ್ನು ಕೆಲವರು ಟೀಕಿಸುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಆದರೆ, ದಲಿತ ಚಳುವಳಿ ಗಳು ನಡೆಸಿದ ಪ್ರಖರ ಚಳುವಳಿಗಳಿಂದ ಎಚ್ಚೆತ್ತುಕೊಂಡ ಸರ್ಕಾರಗಳು ದಲಿತರ ಪರವಾದ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿವೆ. ಈ ಬಗ್ಗೆ ಸಂಘಟನೆ ಕಾರ್ಯಕರ್ತರು ಸಮುದಾಯದ ಜನರಿಗೆ ತಿಳಿಸಬೇಕೆಂದರು.
ದಲಿತ ಚಳುವಳಿಗಳನ್ನು ಸದೃಢವಾಗಿ ಕಟ್ಟಿದ ಹಿರಿಯರ, ಚಿಂತಕರ ತ್ಯಾಗವನ್ನು ಕಾರ್ಯಕರ್ತರು ಮನಗಂಡು ಅವರ ಮಾರ್ಗದಲ್ಲಿ ನಡೆಯ ಬೇಕೆಂದ ಅವರು, ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬಿಗಡಾಯಿಸುತ್ತಿದ್ದು ಈ ಬಗ್ಗೆಯೂ ಜಾಗೃತರಾಗಬೇಕೆಂದರು.ಕೆಲವು ಕೋಮುವಾದಿ ಶಕ್ತಿಗಳು ಧಾರ್ಮಿಕ ಸಂಸತ್ತುಗಳಲ್ಲಿ ರಚನೆಗೊಂಡ ಅಲಿಖಿತ ಸಂವಿಧಾನಗಳ ಮೂಲಕ ಜನರ ನಡುವೆ ಧಾರ್ಮಿಕ ಭಯೋತ್ಪಾದನೆ ಬಿತ್ತುವ ಮೂಲಕ ಲಿಖಿತ ಸಂವಿಧಾನದ ಮೇಲೆ ದಾಳಿ ನಡೆಸುವ ಷಡ್ಯಂತ್ರದ ಬಗ್ಗೆ ಕಾರ್ಯಕರ್ತರು ಎಚ್ಚರವಹಿಸಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದ ಅವರು, ಸರ್ಕಾರವನ್ನು ಪ್ರಶ್ನಿಸಿದ ಬುದ್ದಿಜೀವಿಗಳು, ಜನಪರ ಚಿಂತಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗೆ ತಳ್ಳುತ್ತಿದ್ದು ಇಂತಹ ಜನವಿರೋಧಿ ನೀತಿಗಳ ವಿರುದ್ಧ ಕಾರ್ಯಕರ್ತರು ಮೌನ ಮುರಿದು ಹೋರಾಟಕ್ಕೆ ಮುಂದಾಗಬೇಕೆಂದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಲಿತ ಚಳುವಳಿಗಳು ರಾಜ್ಯದಲ್ಲಿ ಶೋಷಿತರ ಧ್ವನಿಯಾಗಿ ಕೆಲಸ ಮಾಡಿವೆ. ದಲಿತ ಸಂಘಟನೆಗಳೆಲ್ಲವೂ ಒಗ್ಗೂಡಿ ಮರುಹುಟ್ಟು ಪಡೆದುಕೊಂಡು ಹಿಂದಿನ ಶಕ್ತಿ ಪಡೆದು ಕೊಳ್ಳಬೇಕಿದೆ. ಈ ಕುರಿತು ಐಕ್ಯತಾ ಸಮಿತಿ ರಚನೆಯಾಗಿದ್ದು, ಸಂಘಟನೆಗಳ ಮುಖಂಡರೆಲ್ಲ ಒಗ್ಗೂಡಬೇಕಾಗಿದೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಚ್.ಎಂ.ರುದ್ರಸ್ವಾಮಿ ಬಸವಲಿಂಗಪ್ಪನವರ ಬೂಸಾ ಚಳವಳಿ ಮತ್ತು ದಲಿತ ಸಂಘರ್ಷ ಸಮಿತಿ ಹುಟ್ಟಿದ ಕುರಿತು ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಮಲ್ಲೇಶ ಅಂಬುಗ ಮಾತನಾಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್, ಸಿದ್ದರಾಜು ದೊಡ್ಡಿನವಾಡಿ, ಕಾರಹಳ್ಳಿ ಶ್ರೀನಿವಾಸ, ಜಿಲ್ಲಾ ಸಂಘಟನಾ ಸಂಚಾಲಕ ಉದ್ದೇಬೋರನಹಳ್ಳಿ ರಮೇಶ್, ಮಂಜಯ್ಯ ಬಾಚಿಗನಹಳ್ಳಿ, ಕಂಡಪ್ಪ ತೊಂಡುವಳ್ಳಿ, ಮಂಜುನಾಥ ಮೂಡಿಗೆರೆ, ಜಿಲ್ಲಾ ಖಜಾಂಚಿ ಲಕ್ಯಾ ಸಂತೋಷ, ಮಹಿಳಾ ಮುಖಂಡರಾದ ಆಶಾ, ಶೇಷಮ್ಮ, ಯಶೋಧಮ್ಮ, ಚಿಕ್ಕಮಗಳೂರು ತಾಲೂಕಿನ ಮಂಜುನಾಥ ನಂಬಿಯಾರ್, ಕೊಪ್ಪ ಶೇಖರ್, ನರಸಿಂಹರಾಜಪುರ ರವಿ, ಶೃಂಗೇರಿ ಶಂಕರ್, ಎಸ್ಸಿ.ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.
-- ಬಾಕ್ಸ್--"ಜನಪ್ರತಿನಿಧಿಗಳು ಶೋಷಿತರ ಪರ ಚಿಂತಿಸುತ್ತಿಲ್ಲ "
ಸ್ವಾರ್ಥಕ್ಕಾಗಿ ದಲಿತ ಸಂಘಟನೆಗಳು ಒಡೆದು ಹೋಗಿವೆ. ಜನಪ್ರತಿನಿಧಿಗಳು, ಸಚಿವ ರಾಗಲಿ, ಅಧಿಕಾರಿಗಳಾಗಲಿ ತಮ್ಮ ಸುಖದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಶೋಷಿತರ ಪರವಾಗಿ ಚಿಂತಿಸುವುದಿಲ್ಲ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ಸಮಾರಂಭದಲ್ಲಿ ಮಾತನಾಡಿ ದಲಿತ ಸಂಘಟನೆಯ ಉದ್ದೇಶ, ಚಿಂತನೆ ಒಂದೇ ಆಗಿತ್ತು. ಸ್ವಾರ್ಥ ಕೈಬಿಟ್ಟು ಶೋಷಿತರ ಮುಕ್ತಿಗಾಗಿ ಮನೆ, ಮಠ ತೊರೆದು ಸಂಘಟನೆಯಲ್ಲಿ ದುಡಿದವರು ಸಾಕಷ್ಟು ಜನರು ನಮ್ಮ ಕಣ್ಣುಮುಂದೆ ಇದ್ದಾರೆ. ಈಗಿನ ವ್ಯವಸ್ಥೆಯಲ್ಲಿ ದಲಿತರ ವಿಮೋಚನೆ ಅಸಾಧ್ಯ. ನಮ್ಮ ವಿರುದ್ಧದ ಶಕ್ತಿಗಳು ಬೇರೆ ರೂಪದಲ್ಲಿ ಹುಟ್ಟಿ ಕೊಳ್ಳುತ್ತಿವೆ. ಎಚ್ಚರದಿಂದ ಇರಬೇಕಾಗಿದೆ ಎಂದು ಕಿವಿಮಾತು ಹೇಳಿದರು.24 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾವಳ್ಳಿ ಶಂಕರ್ ಅವರು ಮಾತನಾಡಿದರು. ಎಂ. ರುದ್ರಸ್ವಾಮಿ, ರಮೇಶ್, ಸಿದ್ದರಾಜು, ಲಕ್ಷ್ಮಣ್, ಬಸವರಾಜ್ ಇದ್ದರು.