ಚಿನ್ನದ ನಿಕ್ಷೇಪ ಇಲ್ಲದ ಬಿಜಿಎಂಲ್‌ ಪ್ರಾರಂಭ ಕಷ್ಟ

| Published : Sep 05 2025, 01:00 AM IST

ಸಾರಾಂಶ

ಈಗಾಗಲೇ ಸೈನೈಡ್ ದಿಬ್ಬಗಳ ಹರಾಜಿಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಹಿಂದೆ ಮಾಡಿರುವ ಮೌಲ್ಯಮಾಪನ ಪ್ರಕಾರ ೩೬ ಸಾವಿರ ಕೋಟಿ ರುಪಾಯಿಗಳ ನಿಕ್ಷೇಪ ಇರುವುದು ಪತ್ರಿಕೆಗಳಲ್ಲಿ ಬಂದಿರುವ ಸುದಿಯಷ್ಟೇ, ಸೈನೈಡ್ ದಿಬ್ಬಗಳನ್ನು ಮರು ಮೌಲ್ಯಮಾಪನ ಮಾಡಿ ದಿಬ್ಬಗಳಲ್ಲಿ ಸಿಗುವ ಖನಿಜಗಳ ಬೆಲೆಯನ್ನು ನಿಗದಿ ಮಾಡಿ ಟೆಂಡರ್ ಕರೆಯಲಾಗುವುದು.

ಕನ್ನಡಪ್ರಭ ವಾರ್ತೆ ಕೆಜಿಎಫ್ಬಿಜಿಎಂಎಲ್ ಭಾಗದಲ್ಲಿ ಚಿನ್ನದ ನಿಕ್ಷೇಪವಿದೆಯೇ ಎಂಬುದನ್ನು ಸರ್ವೇ ನಡೆಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು, ಖಾಸಗಿ ಏಜೆನ್ಸಿಯು ಇಲ್ಲಿ ಯಾವುದೇ ಚಿನ್ನದ ನಿಕ್ಷೇಪವಿಲ್ಲ ಎಂದು ವರದಿ ನೀಡಿದೆ. ಆದ್ದರಿಂದ ಮತ್ತೆ ಬಿಜಿಎಂಎಲ್ ಪ್ರಾರಂಭವಾಗುವುದು ಸಂದೇಹವಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.

ಬಿಜಿಎಂಎಲ್ ಸ್ವರ್ಣಭವನ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಜಿಎಫ್ ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರೂ ಸಹ ರಾಜ್ಯ ಸರ್ಕಾರವು ಬಿಜಿಎಂಎಲ್ ಕಾರ್ಖಾನೆಯನ್ನು ಪ್ರಾರಂಭಿಸಲು ಮುಂದೆ ಬಂದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರವು ಬಿಜಿಎಂಎಲ್ ಜಾಗದಲ್ಲಿ ಹಾಕಲಾಗಿರುವ ಸೈನೈಡ್ ದಿಬ್ಬಗಳನ್ನು ಹಾರಾಜು ಹಾಕುವ ಪ್ರಕ್ರಿಯೆಯನ್ನು ಮುಂದುವರೆಸಲಿದೆ ಎಂದರು.ಸೈನೈಡ್ ದಿಬ್ಬ ಮೌಲ್ಯಮಾಪನಈಗಾಗಲೇ ಸೈನೈಡ್ ದಿಬ್ಬಗಳ ಹರಾಜಿಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಹಿಂದೆ ಮಾಡಿರುವ ಮೌಲ್ಯಮಾಪನ ಪ್ರಕಾರ ೩೬ ಸಾವಿರ ಕೋಟಿ ರುಪಾಯಿಗಳ ನಿಕ್ಷೇಪ ಇರುವುದು ಪತ್ರಿಕೆಗಳಲ್ಲಿ ಬಂದಿರುವ ಸುದಿಯಷ್ಟೇ, ಸೈನೈಡ್ ದಿಬ್ಬಗಳನ್ನು ಮರು ಮೌಲ್ಯಮಾಪನ ಮಾಡಿ ದಿಬ್ಬಗಳಲ್ಲಿ ಸಿಗುವ ಖನಿಜಗಳ ಬೆಲೆಯನ್ನು ನಿಗದಿ ಮಾಡಿ ಟೆಂಡರ್ ಕರೆಯಲಾಗುವುದೆಂದು ತಿಳಿಸದರು. ೨೮೦೦ ಕಾರ್ಮಿಕರ ಪೈಕಿ ೧೮೦೦ ಕಾರ್ಮಿಕರ ಮನೆಗಳ ವಾಸ ಮಾಡುತ್ತಿರುವ ಕುರಿತು ದೃಢಿಕರಣಗೊಳಿಸಲಾಗಿದೆ, ಇನ್ನೂ ಒಂದು ಸಾವಿರ ಕಾರ್ಮಿಕರ ಮನೆಗಳ ದೃಢಿಕರಣ ಪತ್ರ ನೀಡಲು ಹಲವು ದಾಖಲೆಗಳನ್ನು ಕೇಳಲಾಗಿದ್ದು, ೨ ತಿಂಗಳಲ್ಲಿ ಕೇಂದ್ರದ ಗಣಿ ಸಚಿವ ಕಿಶನ್‌ರೆಡ್ಡಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಬ್ಬರು ಸಚಿವರೂ ಸಹ ಕೆಜಿಎಫ್‌ಗೆ ಆಗಮಿಸಿ ಎಸ್‌ಟಿಬಿಪಿ ಯೋಜನೆಯಡಿ ನಿವೃತ್ತಿಗೊಂಡ ಕಾರ್ಮಿಕರಿಗೆ ವಾಸಸ್ಥಳದ ದೃಢೀಕರಣ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದರು.

೨೦ ಲಕ್ಷ ವೆಚ್ಚದಲ್ಲಿ ಮೈದಾನ ಶುದ್ದಿಕರಣ:

ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗಿದ್ದ ಜಿಮ್ಕಾನ ಮೈದಾನ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಸೇವ್ ಕೆಜಿಎಫ್ ಸದಸ್ಯರು ಸಂಸದರನ್ನು ಒತ್ತಾಯ ಮಾಡಿದ್ದರು. ಅದರಂತೆ ಕ್ರೀಡಾಂಗಣವನ್ನು ಬಿಜಿಎಂಎಲ್‌ನ ಸಿಎಸ್‌ಒರೊಂದಿಗೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಳಿಕ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಕೃಷ್ಣಾ ನದಿ ನೀರು ಬಗ್ಗೆ ಪರಿಶೀಲನೆ

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯ ಬಳಿ ನಿರ್ಮಿಸಲಾಗಿರುವ ಕೃಷ್ಣಾ ನದಿ ಡ್ಯಾಂನಿಂದ ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಆ ನೀರನ್ನು ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮದನಪಲ್ಲಿಗೆ ಭೇಟಿ ನೀಡಿ ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಎಷ್ಟು ಮತ್ತು ನೀರು ಕೋಲಾರ ಜಿಲ್ಲೆಗೆ ಹರಿಸುವ ಬಗೆಗಿನ ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಆಂಧ್ರ ಸಿಎಂ, ಡಿಸಿಎಂ ಜತೆ ಚರ್ಚೆ

ಮುಂಬರುವ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್ ಚಿಂತಾಮಣಿಗೆ ಬರುತ್ತಿದ್ದು ಆ ಸಂದರ್ಭದಲ್ಲಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಅಲ್ಲದೇ ಇದೇ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರ ಜತೆ ಮಾತನಾಡಿ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್, ನಗರಸಭೆ ಸದಸ್ಯ ಪಾಂಡಿಯನ್ ಮೊದಲಾದವರು ಹಾಜರಿದ್ದರು.