ಸಾರಾಂಶ
- ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ದೌಡು । ತುರ್ತು ದುರಸ್ತಿಗೆ ಹಣ ಬಿಡುಗಡೆಗೆ ನೀರಾವರಿ ನಿಗಮ ಎಂ.ಡಿ.ಗೆ ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆತಾಲೂಕಿನ ಕುರ್ಕಿ ಗ್ರಾಮದಲ್ಲಿ ಮಂಗಳವಾರ ಭದ್ರಾ ಕಾಲುವೆ ಸೇತುವೆ ಒಂದಿಷ್ಟು ಭಾಗ ಕುಸಿದಿದ್ದು, ವಿಚಾರ ತಿಳಿಯುತ್ತಿದ್ದಂತೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಪರಿಶೀಲಿಸಿದರು.
ಶಾಸಕರು ಮಾತನಾಡಿ, ಭದ್ರಾ ಜಲಾಶಯದಿಂದ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಈಗಾಗಲೇ ನೀರು ಹರಿಸಲಾಗಿದೆ. 2 ದಿನಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಕುರ್ಕಿ ಗ್ರಾಮದ ಬಳಿ ಭದ್ರಾ ಕಾಲುವೆಯ ಜಂಕ್ಷನ್ ಸಮೀಪ ಹರಿಹರ ಮತ್ತು ಹರಪನಹಳ್ಳಿ ಭಾಗಕ್ಕೆ ನೀರು ಬಿಡುವ ಗೇಟ್ ಬಳಿ 6/3ನೇ ಭದ್ರಾ ಕಾಲುವೆ ಸೇತುವೆ ಕುಸಿದಿದೆ. ತಕ್ಷಣವೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.ನಿಗಮ ವ್ಯವಸ್ಥಾಪಕರಿಗೆ ಫೋನ್:
ಒಂದು ಕಡೆ ಜಮೀನುಗಳಿಗೆ ನೀರು ನುಗ್ಗಿದೆ. ಹರಿಹರ, ಹರಪನಹಳ್ಳಿ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿದರೆ, ಈ ಭಾಗದ ರೈತರಿಗೆ ನೀರು ಸಿಗುವುದಿಲ್ಲ. ಈ ಸಮಸ್ಯೆ ಮನಗಂಡ ಶಾಸಕ ಕೆ.ಎಸ್.ಬಸವಂತಪ್ಪ, ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸೇತುವೆಯು ಕುಸಿದು ಇಲ್ಲಿ ಆಗಿರುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದರು.ಕಬ್ಬೂರು, ರಾಮಗೊಂಡನಹಳ್ಳಿ ಬಳಿಯ ಸೇತುವೆಯೂ ಕಿತ್ತುಹೋಗಿದೆ. ಹೊನ್ನೂರು ಬಳಿ ಟೂಬ್ ಕಿತ್ತು ಜಮೀನುಗಳಿಗೆ ನೀರು ನುಗ್ಗಿದೆ. ಇದೇ ರೀತಿ ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆಗಳು ಮತ್ತು ಸೇತುವೆಗಳು ಶಿಥಿಲಗೊಂಡಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಈಗಾಗಲೇ ನಿಗಮಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸೇತುವೆ ಮತ್ತು ಕಾಲುವೆ ಆಧುನೀಕರಣ ಕೈಗೊಳ್ಳದಿದ್ದರೆ ಮುಂದೆ ₹10 ಖರ್ಚು ಮಾಡಬೇಕಾದ ಸ್ಥಳದಲ್ಲಿ ₹100 ಖರ್ಚು ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗಿ, ವಿಳಂಬ ಮಾಡದೇ, ಭದ್ರಾ ಕಾಲುವೆಗಳು ಮತ್ತು ಸೇತುವೆಗಳನ್ನು ಶೀಘ್ರ ಆಧುನೀಕರಣಗೊಳಿಸಬೇಕು. ಕುಸಿದಿರುವ ಸೇತುವೆಯನ್ನು ತಾತ್ಕಾಲಿಕವಾಗಿ ತುರ್ತು ದುರಸ್ತಿಗೆ ಹಣ ಬಿಡುಗಡೆ ಮಾಡಬೇಕು. ತಕ್ಷಣವೇ ಸೇತುವೆ ದುರಸ್ತಿಗೊಳಿಸಲು ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಶಾಸಕರ ಮನವಿಗೆ ನಿಗಮ ಸಹ ಸ್ಪಂದಿಸಿದೆ.ಈ ಸಂದರ್ಭ ನೀರಾವರಿ ಇಲಾಖೆ ಎಇಇ ಮನೋಜ್, ಇಇ ಮಂಜುನಾಥ, ಎಂಜಿನಿಯರ್ ಸತೀಶ, ಗ್ರಾಮಸ್ಥರಾದ ನಂದ್ಯಪ್ಪ, ವೀರೇಂದ್ರಾಚಾರ್ಯ, ಶಿವಜ್ಜ, ಮರುಳಸಿದ್ದಪ್ಪ, ಹಾಲೇಶ, ರಾಮಗೊಂಡಹಳ್ಳಿ ಮಲ್ಲಿಕಾರ್ಜುನ ಇನ್ನಿತರರು ಇದ್ದರು.
- - -ಬಾಕ್ಸ್ * ಮನೆ ಕುಸಿತ, ಗಾಯಾಳುಗಳ ಭೇಟಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕು ಚಿಕ್ಕಕುರುಬರಹಳ್ಳಿ ಗ್ರಾಮದಲ್ಲಿ 2 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆ ಬಿದ್ದಿದ್ದರಿಂದ ನಾಗಪ್ಪ (40) ಎಂಬವರ ಕಾಲು, ಪತ್ನಿ ಅಕ್ಷತಾ (30) ಅವರ ಕೈ ಹಾಗೂ 10 ವರ್ಷದ ಮಗಳ ಕೈ-ಕಾಲು ಮುರಿದಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದು ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
- - - -20ಕೆಡಿವಿಜಿ3:ದಾವಣಗೆರೆ ತಾಲೂಕು ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ 6/3ನೇ ಸೇತುವೆ ಕುಸಿದುಬಿದ್ದ ಸ್ಥಳಕ್ಕೆ ಶಾಸಕ ಬಸವಂತಪ್ಪ ಅವರು ಅಧಿಕಾರಿಗಳು, ಸ್ಥಳೀಯರ ಜೊತೆಗೆ ಭೇಟಿ ನೀಡಿ, ಪರಿಶೀಲಿಸಿದರು. -20ಕೆಡಿವಿಜಿ4, 5:
ದಾವಣಗೆರೆ ತಾಲೂಕು ಕುರ್ಕಿ ಗ್ರಾಮದ ಬಳಿ ಭದ್ರಾ ಕಾಲುವೆಯ 6/3ನೇ ಸೇತುವೆ ಕುಸಿದಿರುವುದು.