18ಕ್ಕೆ ಭದ್ರಾ ಡ್ಯಾಂಗೆ ಬಾಗಿನ ಅರ್ಪಣೆ: ಎಸ್ಸೆಸ್ಸೆಂ

| Published : Aug 16 2024, 12:46 AM IST

ಸಾರಾಂಶ

ಭದ್ರಾ ಜಲಾಶಯಕ್ಕೆ ಹೆಚ್ಚುವರಿಯಾಗಿ ಬಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದ ಬಫರ್ ಸ್ಟೋರ್‌ನಲ್ಲಿ ಎಷ್ಟು ನೀರು ಇರಬೇಕೋ ಅಷ್ಟನ್ನು ಕಾಯ್ದಿರಿಸಲಾಗಿದೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಈ ಸಲ ಉತ್ತಮ ಮಳೆಯಾಗಿದ್ದು, ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಅಣೆಕಟ್ಟೆ ತುಂಬಿರುವ ಹಿನ್ನೆಲೆ ಆ.18ರಂದು ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ನಂತರ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು, ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ಈ ಸಂತೋಷದ ಸಂಗತಿ ಹಿನ್ನೆಲೆ ಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದೇವೆ ಎಂದರು.

ಅಂದು ಮಧ್ಯಾಹ್ನ 12ಕ್ಕೆ ಜಿಲ್ಲೆ ಎಲ್ಲಾ ಶಾಸಕರು, ರೈತ ಮುಖಂಡರು, ರೈತ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು, ಅಚ್ಚುಕಟ್ಟು ರೈತರೆಲ್ಲಾ ಸೇರಿ ತುಂಬಿರುವ ಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದೇವೆ. ಎಲ್ಲರೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.

ಭದ್ರಾ ಜಲಾಶಯಕ್ಕೆ ಹೆಚ್ಚುವರಿಯಾಗಿ ಬಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದ ಬಫರ್ ಸ್ಟೋರ್‌ನಲ್ಲಿ ಎಷ್ಟು ನೀರು ಇರಬೇಕೋ ಅಷ್ಟನ್ನು ಕಾಯ್ದಿರಿಸಲಾಗಿದೆ. ಭದ್ರಾದಿಂದ ನಗರಕ್ಕೆ ಕುಡಿಯುವ ನೀರಿಗಾಗಿ 114 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಉಳಿದ ನೀರನ್ನು ಬಲದಂಡೆ ನಾಲೆಗೆ ಹರಿಸಲಾಗುತ್ತಿದೆ. ಬಾಗಿನ ಅರ್ಪಿಸಲು ಹೋದಾಗ ನೀವು, ನಾವೆಲ್ಲರೂ ಖುದ್ದಾಗಿ ಅದನ್ನೆಲ್ಲಾ ಗಮನಿಸೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಕಸ್ಮಾತ್ 186 ಅಡಿಗೆ ತುಂಬಿಸಿಕೊಳ್ಳಬೇಕೆಂಬು ಕಾದು ಕುಳಿತರೆ ತುಂಗಭದ್ರಾ ಡ್ಯಾಂ ಗೇಟ್‌ ಏನಾಗಿದೆಯೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಹಿನ್ನೆಲೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದಲ್ಲಿ ವ್ಯತ್ಯಾಸ ಆಗದಂತೆ, ನೀರು ಹೊರ ಬಿಡಲಾಗುತ್ತಿದೆ. ಮುಂದಿನ 4-5 ವಾರಗಳ ಕಾಲ ಉತ್ತಮ ಮಳೆಯಾಗುತ್ತದೆಂದು ಹವಾಮಾನ ಇಲಾಖೆ ಮೂಲ ಹೇಳುತ್ತಿವೆ. ಹಾಗೆ ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆಯಾದರೆ ಭದ್ರಾ ಜಲಾಶಯ ಮತ್ತೆ ತುಂಬುತ್ತದೆ. ಇನ್ನೂ ಮಳೆಗಾಲ ತುಂಬಾ ದಿನ ಇದೆ. ಮಳೆ ಬಂದು, ಡ್ಯಾಂ ತುಂಬಿದರೆ ರೈತರಿಗೂ ಅನುಕೂಲ ಎಂದು ಹೇಳಿದರು.

ಮೇಯರ್‌ ಬಿ.ಎಚ್.ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ಅಪರ ಡಿಸಿ ಪಿ.ವಿ.ಲೋಕೇಶ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಜಿ.ಎಸ್‌.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ನಾಗರಾಜ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಎಸ್. ಮಲ್ಲಿಕಾರ್ಜುನ, ಹುಲ್ಮನಿ ಗಣೇಶ, ಕೋಡಿಹಳ್ಳಿ ನವೀನ, ರಾಘವಗೌಡ ಇತರರು ಇದ್ದರು. ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಆಗಿಲ್ಲ: ಎಸ್ಸೆಸ್ಸೆಂ

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಯಾರ ಜೊತೆಗೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಯಾರೋ ಕೆಲವರು ಆರೋಪ ಮಾಡಿರುವಂತೆ ಯಾವುದೂ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿರುವುದಾಗಿ ಕೆಲವರು ಆರೋಪ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ, ಅಂತಹ ಯಾವುದೇ ಹೊಂದಾಣಿಕೆ ರಾಜಕಾರಣ ಆಗಿಲ್ಲ ಎಂದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥರನ್ನು ನಾನು ವಿದ್ಯಾರ್ಥಿ ದೆಸೆಯಿಂದಲೂ ಕಂಡವನು. ಅಲ್ಲದೇ ಸಂಬಂಧದಲ್ಲಿ ನನಗೆ ರವೀಂದ್ರನಾಥ ಅಣ್ಣ ಆಗಬೇಕು. ಚುನಾವಣೆ ಸಂದರ್ಭದಲ್ಲಿ ನಮಗೆ ರವೀಂದ್ರನಾಥ ಸಿಕ್ಕಿದ್ದ ವೇಳೆ ಮಾತನಾಡಿಸಿದೆ. ನಾನೇ ಟೀ ಕುಡಿಸುವುದಿಲ್ಲವೇ ಅಂತಾ ಕೇಳಿದ್ದೆ. ಆಗ ಅವರು, ಇವತ್ತು ಚುನಾವಣೆ ಇದೆ. ಚುನಾವಣೆ ಮುಗಿದ ನಂತರ ನಾಳೆ ಮನೆಗೆ ಬಾ ಅಂದಿದ್ದರು. ಬಿಜೆಪಿ ಹಿರಿಯ ನಾಯಕ ಎಸ್.ಎ.ರವೀಂದ್ರನಾಥ ಹಾಗೂ ನನ್ನ ಮಧ್ಯೆ ನಡೆದಿದ್ದ ಮಾತು ಇಷ್ಟೇ. ಇನ್ನೂ ನಾನು ಟೀ ಕುಡಿಯಲು ರವೀಂದ್ರನಾಥರ ಮನೆಗೆ ಹೋಗಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇನ್ನೂ ಹೊನ್ನಾಳಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಚುನಾವಣೆಗೆ ಮುನ್ನ 2-3 ಸಲ ನನ್ನನ್ನು ಭೇಟಿ ಮಾಡಿದ್ದು ನಿಜ. ಅದೊಂದು ಸಹಜ ಭೇಟಿಯಾಗಿತ್ತು. ಸ್ವತಃ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ವಿಚಾರಕ್ಕೆ ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದ ನಂತರ ರೇಣುಕಾಚಾರ್ಯ ಮತ್ತೆ ಬಂದಿಲ್ಲ. ಅಲ್ಲದೇ, 2-3 ಸಲ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದನ್ನು ಬಿಟ್ಟರೆ ರೇಣುಕಾಚಾರ್ಯ ನನಗೇನೂ ಅಂತಹ ಪರಿಚಯದವರೂ ಅಲ್ಲ. ಈ ಎರಡೂ ಘಟನೆ ನಡೆದಿದ್ದಷ್ಟೇ. ಮತ್ತೊಬ್ಬರ ಮೇಲೆ ಗೂಬೆ ಕೂಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.