ಭದ್ರಾ ಜಲಾಶಯ ಕಾಮಗಾರಿ-ಭಾರೀ ಅವ್ಯವಹಾರದ ಶಂಕೆ

| Published : May 28 2025, 12:34 AM IST

ಸಾರಾಂಶ

ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿನ ನೀರು ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಲ್ಕ್ ಹೆಡ್ ಗೇಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಯ ಅನುಷ್ಠಾನದಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿನ ನೀರು ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಲ್ಕ್ ಹೆಡ್ ಗೇಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಯ ಅನುಷ್ಠಾನದಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಬಲ್ಕ್ ಹೆಡ್ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಟೆಂಡರ್‌ ಕರೆಯಲಾಗಿದ್ದು, ಆಗಲೂ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಈ ಕುರಿತು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಈ ಅವೈಜ್ಞಾನಿಕ ಟೆಂಡರ್ ರದ್ದುಗೊಳಿಸಲಾಗಿತ್ತು.

ಇದೀಗ ಪುನಃ ಈ ಟೆಂಡರ್ ಮೊತ್ತವನ್ನು ಕಡಿತಗೊಳಿಸಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕರೆದಿರುವ ಪರಿಷ್ಕೃತ ಟೆಂಡರ್‌ನಲ್ಲಿ ಕೂಡ ಕಳೆದ ವರ್ಷದ ರೀತಿಯಲ್ಲಿಯೇ ಸಾಕಷ್ಟು ಲೋಪದೋಷಗಳು ಕಂಡು ಬಂದಿದೆ. ಇದೇ ವೇಳೆ ಟೆಂಡರ್‌ ಅನ್ನು ತಮಗೆ ಬೇಕಾದ ಹಾಗೂ ಕಾಮಗಾರಿ ಕೈಗೊಳ್ಳಲು ಅರ್ಹತೆಯೇ ಇಲ್ಲದ ಕಂಪನಿಗೆ ಅಧಿಕಾರಿಗಳು ನೀಡಿರುವುದು ಬೆಳಕಿಗೆ ಬಂದಿದೆ.

ಡ್ಯಾಂನಲ್ಲಿನ ನೀರು ಸೋರಿಕೆಯನ್ನೇ ಮುಂದಿಟ್ಟುಕೊಂಡು ಸರ್ಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಯಾಮಾರಿಸುವ ನಿಟ್ಟಿನಲ್ಲಿ ಪ್ರಭಾವಿ ಶಾಸಕರು ಹಾಗೂ ಕರ್ನಾಟಕ ನೀರಾವರಿ ನಿಗಮದ ಇಬ್ಬರು ಎಂಜಿನಿಯರ್‌ಗಳು ಮುತುವರ್ಜಿ ವಹಿಸಿ ಕೆಲಸ ಮಾಡಿರುವುದು ಕಂಡುಬಂದಿದೆ.

ಮಳೆಗಾಲ ಆರಂಭಕ್ಕೂ ಮುನ್ನ ನಡೆಯಬೇಕಿದ್ದ ಕಾಮಗಾರಿಯನ್ನು ಮಳೆಗಾಲದಲ್ಲಿ ಕೈಗೊಳ್ಳುವ ಮೂಲಕ ಡ್ಯಾಂ ನಿರ್ವಹಣೆ ಹಾಗೂ ತುರ್ತು ಕಾಮಗಾರಿಗೆ ಬಿಡುಗಡೆಯಾಗಿರುವ ಕೋಟ್ಯಂತರ ರುಪಾಯಿಯನ್ನು ದುರ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಹೊಂಚು ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಡ್ಯಾಂ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿಕೊಂಡು ತರಾತುರಿಯಲ್ಲಿ ಅಧಿಕಾರಿಗಳು ನಡೆಸುತ್ತಿರುವ ಕಾಮಗಾರಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಏನಿದು ಟೆಂಡರ್ ಭಾನಗಡಿ ?:

ಭದ್ರಾ ಡ್ಯಾಂನ ಎಡದಂಡೆ ನಾಲೆಯಲ್ಲಿ ಹತ್ತಾರು ವರ್ಷಗಳಿಂದ ವರ್ಷವಿಡೀ ಮೂರ್ನಾಲ್ಕು ಅಡಿಯಷ್ಟು ನೀರು ನಿರಂತರವಾಗಿ ಸೋರಿಕೆಯಾಗಿ ಹರಿದು ಹೋಗುತ್ತದೆ. ಈ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಲ್ಕ್ ಹೆಡ್ ಸ್ಲೂಯಿಸ್ ಗೇಟ್ ಅಳವಡಿಕೆ ಸೇರಿದಂತೆ ಅಂಡರ್ ವಾಟರ್ ಕಾಂಕ್ರೀಟ್, ರಬ್ಬರ್ ಅಳವಡಿಕೆ ಮತ್ತಿತರ ಕೆಲಸಗಳಿಗೆ ಕಳೆದ ಏಪ್ರಿಲ್ 29 ರಂದು 6,37,88,634.33 ರು. ಟೆಂಡರ್ ಕರೆಯಲಾಗಿತ್ತು.

ಆದರೆ ಇದೇ ಮಾದರಿಯ ಕಾಮಗಾರಿಯನ್ನು ಹೇಮಾವತಿ ಸೇರಿದಂತೆ ರಾಜ್ಯದ ವಿವಿಧ ಜಲಾಶಯಗಳಲ್ಲಿ ಕೆಲವೇ ಲಕ್ಷಗಳಲ್ಲಿ ನಿರ್ವಹಿಸಲಾಗಿತ್ತು. ಹೀಗಿದ್ದೂ ಪ್ರತಿಯೊಂದು ಕೆಲಸಕ್ಕೆ ಮಾರುಕಟ್ಟೆ ದರಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚಿನ ಮೊತ್ತವನ್ನು ನಿಗದಿಪಡಿಸುವ ಮೂಲಕ ಸರ್ಕಾರದ ಹಣವನ್ನು ವ್ಯರ್ಥ ಮಾಡುವ ಸಲುವಾಗಿ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಪ್ರಭಾವಿ ಶಾಸಕರು ಶಾಮೀಲಾಗಿ ಟೆಂಡರ್ ಕರೆದಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂಬ ಸಂಶಯ ಎದುರಾಗಿದೆ.

ಲೋಕಸಭಾ ಚುನಾವಣೆ ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭವನ್ನು ಬಳಸಿಕೊಂಡು ಡ್ಯಾಂಗೆ ಅಪಾಯವಿರುವ ಕಾರಣಕ್ಕೆ ತುರ್ತು ಕೆಲಸ ಕೈಗೊಳ್ಳಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದು ಟೆಂಡರ್ ಕರೆಯಲಾಗಿತ್ತು.

ಇದನ್ನು ಮನಗಂಡ ಸ್ಥಳೀಯರು ತುರ್ತು ಕೆಲಸದ ಹೆಸರಿನಲ್ಲಿ ಕೋಟ್ಯಂತರ ರುಪಾಯಿಯನ್ನು ಲೂಟಿ ಹೊಡೆಯುವ ಯತ್ನ ನಡೆದಿದ್ದು, ಇದನ್ನು ತಡೆಯಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.

ಇದರ ಪರಿಣಾಮ ಟೆಂಡರ್ ರದ್ದಾಗಿತ್ತು. ಇದೇ ವೇಳೆ ಡ್ಯಾಂ ಕಾಮಗಾರಿಯಲ್ಲಿ ಅನುಭವವೇ ಇಲ್ಲದ ಹಾಗೂ ಈ ಹಿಂದೆ ನಡೆಸಿದ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಪ್ಪುಪಟ್ಟಿಗೆ ಸೇರಿದ್ದ ಬೆಂಗಳೂರು ಮೂಲದ ಮೆ.ಅಪಾರ್ ಇನ್ಫ್ರಾಟೆಕ್ ಪ್ರೈ.ಲಿ.,ಗೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಟೆಂಡರ್ ನೀಡಿದ್ದು ಬೆಳಕಿಗೆ ಬಂದಿತ್ತು.

ಈ ಕುರಿತು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಇದಾದ ನಂತರವೂ ಸುಮ್ಮನಾಗದ ಅಧಿಕಾರಿಗಳು ಮತ್ತೊಮ್ಮೆ ಟೆಂಡರ್ ಕರೆದಿದ್ದಾರೆ. ಕಳೆದ ಆಗಸ್ಟ್ 28 ರಂದು ಟೆಂಡರ್ ಕರೆದಿರುವ ಅಧಿಕಾರಿಗಳು 4,23,64, 750.44 ರುಪಾಯಿಗೆ ವಿವಿಧ ಕಾಮಗಾರಿಯನ್ನು ನಿಗದಿಪಡಿಸಿದ್ದಾರೆ.

ಹೊಸದಾಗಿ ಕರೆದಿರುವ ಟೆಂಡರ್‌ನಲ್ಲಿ ಈ ಹಿಂದಿನ ಟೆಂಡರ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಕೆಲಸಗಳು ಸೇರಿದ್ದಾಗ್ಯೂ ಸುಮಾರು 2 ಕೋಟಿಯಷ್ಟು ಕಡಿಮೆ ಮೊತ್ತವನ್ನು ನಿಗದಿಪಡಿಸಿದ್ದಾರೆ. ಅಲ್ಲದೆ ಸದರಿ ಕೆಲಸ ನಿರ್ವಹಿಸಲು ಅರ್ಹತೆಯೇ ಇಲ್ಲದ ಕಂಪನಿಗೆ ಅನುಕೂಲವಾಗುವಂತೆ ಟೆಂಡರ್ ಕರೆದು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ

ವಿಚಾರಣೆ ಬಾಕಿ ಇದ್ದಾಗ್ಯೂ ಕಾಮಗಾರಿ:

ಟೆಂಡರ್ ನಿರ್ವಹಿಸಲು ಅರ್ಹತೆಯೇ ಇರದ ಕಂಪನಿಗೆ ಕಾಮಗಾರಿ ವಹಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಮುಂಬಯಿ ಮೂಲದ ಡೈನೋಸಾರ್ ಕಾಂಕ್ರೀಟ್ ಟ್ರೀಟ್ಮೆಂಟ್ ಪ್ರೈ.ಲಿ. ಸಂಸ್ಥೆಯು ಮೇಲ್ಮನವಿ ಪ್ರಾಧಿಕಾರವಾದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕೆಎನ್ ಎನ್ ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ ಹಾಗೂ ಅಪಾರ್ ಇನ್ಫ್ರಾಟೆಕ್ ಪ್ರೈ.ಲಿ.,ಗೆ ನೋಟಿಸ್ ಜಾರಿ ಮಾಡಿ ಮೇ 23 ಕ್ಕೆ ವಿಚಾರಣೆ ನಿಗದಿಪಡಿಸಿದ್ದರು.

ಆದರೆ ವಿಚಾರಣೆ ಬಾಕಿ ಇರುವ ಮುನ್ನವೇ ಭದ್ರಾ ಡ್ಯಾಂನಲ್ಲಿ ಅಪಾರ್ ಕಂಪನಿಯವರು ಕಾಮಗಾರಿ ಆರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಟೆಂಡರ್ ಪಡೆದ ನಾಲ್ಕೈದು ದಿನದಲ್ಲೇ ಹೊಸಪೇಟೆಯಲ್ಲಿ ಗುಜರಿಗೆ ಸೇರಿ ತುಕ್ಕು ಹಿಡಿಯುತ್ತಿದ್ದ ಬಲ್ಕ್ ಹೆಡ್ ಗೇಟ್‌ನ್ನು ತರಲಾಗಿದ್ದು, ಅದು ಇಲ್ಲಿನ ಡಿಸೈನ್ಗೆ ಹೊಂದಿಕೆ ಅಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಹೀಗೆ ಡ್ಯಾಂ ಕೆಲಸ ನಿರ್ವಹಿಸಿದ ಅನುಭವವೇ ಇಲ್ಲದ ಕಂಪನಿಗೆ ಟೆಂಡರ್ ವಹಿಸುವಲ್ಲಿ ಕೆಎನ್ ಎನ್ ನ ಇಬ್ಬರು ಸ್ಥಳೀಯ ಎಂಜಿನಿಯರ್ ವಿಶೇಷ ಆಸಕ್ತಿ ವಹಿಸಿದ್ದು, ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಲಾಭ ಪಡೆಯಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಒಟ್ಟಾರೆ ಡ್ಯಾಂನ ಗೇಟ್ ದುರಸ್ತಿಗಾಗಿ ಕರೆದಿರುವ ಟೆಂಡರ್, ಅನರ್ಹ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿರುವ ನಿಯಮಗಳು ಹಾಗೂ ತೋರಲಾಗುತ್ತಿರುವ ತರಾತುರಿಯ ಹಿಂದೆ ಭಾರೀ ಕಿಕ್ ಬ್ಯಾಕ್ನ ಸದ್ದು ಕೇಳಿ ಬರುತ್ತಿದೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿದಲ್ಲಿ ವಾಸ್ತವಾಂಶ ಬೆಳಕಿಗೆ ಬರುವುದರಲ್ಲಿ ಯಾವುದೆ ಅನುಮಾನ ಇಲ್ಲ.