ಸಾರಾಂಶ
-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ತಿಂಗಳ ಅತಿಥಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭದ್ರಾ ಉಪ ಕಣಿವೆಯಿಂದ ಚಿಕ್ಕಮಗಳೂರು ಕ್ಷೇತ್ರದ ಬರ ಪೀಡಿತ ಹೋಬಳಿಗಳಿಗೆ ನೀರು ಹರಿಸುವುದು ಹಾಗೂ ಚಿಕ್ಕಮಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಈ ಕಾರ್ಯಗಳನ್ನು ಮಾಡುವ ಭರವಸೆ ನೀಡಿದರು.ಭದ್ರಾ ಉಪ ಕಣಿವೆ ಯೋಜನೆ, ಇದು, 1298 ಕೋಟಿ ರು.ಗಳ ಯೋಜನೆ, ಈಗಾಗಲೇ ಎರಡು ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿಕ್ಕಮಗಳೂರು ಕ್ಷೇತ್ರ ನಾಲ್ಕನೇ ಹಂತದಲ್ಲಿದೆ. ಈ ಯೋಜನೆಯಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲಕ್ಕೆ ತುತ್ತಾಗುವ ಹಳ್ಳಿಗಳಿಗೆ ನೀರು ಹರಿಸಲು ಇಲ್ಲಿನ 23 ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ, ಜಿಲ್ಲಾ ಕೇಂದ್ರದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದ್ದರೆ ಬಡವರಿಗೆ ಅನುಕೂಲವಾಗುವ ಜೊತೆಗೆ ಮಂಗಳೂರು, ಶಿವಮೊಗ್ಗ ಇತರ ಕಡೆಗೆ ರೋಗಿ ಗಳನ್ನು ಕಳುಹಿಸುವ ಪರಿಸ್ಥಿತಿ ತಪ್ಪುತ್ತದೆ. ಆದ್ದರಿಂದ ಇಲ್ಲಿಯೇ ಒಂದು ಅತ್ಯುತ್ತಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಕನಸು ಹೊಂದಿದ್ದು, ತಮಗಿರುವ ಅಧಿಕಾರವಧಿಯಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಚಿಕ್ಕಮಗಳೂರು ತಾಲೂಕನ್ನು ಸಂಪೂರ್ಣವಾಗಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ, ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷ ತಡೆಯುವಂತೆ ಕಾಮೇನಹಳ್ಳಿ, ಕೊಂಬುಗತ್ತಿ ಸುತ್ತಮುತ್ತಲ ರೈತರ ಜಮೀನು ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಎಸ್.ಎಲ್ ಬೋಜೇಗೌಡರನ್ನು ಗೆಲ್ಲಿಸುವಂತೆ ಹೇಳಿಕೆ ನೀಡಿದ್ದ ಬಗ್ಗೆ ಗಮನ ಸೆಳೆದಾಗ ಆ ಸಂದರ್ಭದಲ್ಲಿ ಜೆ.ಡಿ.ಎಸ್ ಬಿಜೆಪಿ ಜೊತೆ ವಿಲೀನವಾಗಿರಲಿಲ್ಲ ಶಿಕ್ಷಕರ ಪರವಾಗಿ ಕೆಲಸ ಮಾಡುವ ಭೋಜೇಗೌಡ ರಂತಹವರು ಆರಿಸಿ ಬಂದರೆ ಒಳ್ಳೆಯದೆಂದು ಹೇಳಿದ್ದೇನೆಯೇ ಹೊರತು ಭೋಜೇಗೌಡರನ್ನು ಗೆಲ್ಲಿಸಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್.ತಾರಾನಾಥ್ ಸ್ವಾಗತಿಸಿದರು.
-- ಬಾಕ್ಸ್--ಬಸವನಹಳ್ಳಿ ಕೆರೆ ಕಾಮಗಾರಿ- ಹಿರಿಯ ಅಧಿಕಾರಿಗಳಿಂದ ತನಿಖೆ
ಚಿಕ್ಕಮಗಳೂರು: ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಪುರಾತತ್ವ ಇಲಾಖೆ ನಿವೃತ್ತ ಆಯುಕ್ತ ಬೆಟಸುರಮಠ ಅವರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಸುಮಾರು 29.46 ಕೋಟಿ ರು. ವೆಚ್ಚದ ಕಾಮಗಾರಿಗೆ ಹಿಂದಿನ ಸರ್ಕಾರ 7 ಕೋಟಿ ರು. ಬಿಡುಗಡೆ ಮಾಡಿತ್ತು. ಇನ್ನು 22 ಕೋಟಿ ರು. ಗುತ್ತಿಗೆದಾರರಿಗೆ ಕೊಡಬೇಕಾಗಿದೆ. ಈ ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ತನಿಖೆ ನಡೆಸಲು ಅಧಿಕಾರಿಯನ್ನು ನೇಮಕ ಮಾಡಿದ್ದು, ಅವರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. 16 ಕೆಸಿಕೆಎಂ 3
ಚಿಕ್ಕಮಗಳೂರು ಪ್ರೆಸ್ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಮಾತನಾಡಿದರು. ಅಧ್ಯಕ್ಷ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಇದ್ದರು.