ನೀರಾವರಿ ಬೆಳೆ ಸಂರಕ್ಷಣೆ ಹಿನ್ನೆಲೆಯಲ್ಲಿ ಮುಂದಿನ ಏಪ್ರಿಲ್ ಅಥವಾ ಮೇ ಅಂತ್ಯದೊಳಗೆ ತಾಲೂಕಿನ 25ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸುವುದಾಗಿ ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ರಘುಮೂರ್ತಿ ಭರವಸೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ನೀರಾವರಿ ಬೆಳೆ ಸಂರಕ್ಷಣೆ ಹಿನ್ನೆಲೆಯಲ್ಲಿ ಮುಂದಿನ ಏಪ್ರಿಲ್ ಅಥವಾ ಮೇ ಅಂತ್ಯದೊಳಗೆ ತಾಲೂಕಿನ 25ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸುವುದಾಗಿ ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ರಘುಮೂರ್ತಿ ಭರವಸೆ ವ್ಯಕ್ತಪಡಿಸಿದರು.ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಭಾನುವಾರ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ರಾಜ ವೀರ ಮದಕರಿ ನಾಯಕರ ಪುತ್ಥಳಿ ಅನಾವರಣ ಮತ್ತು ದಕ್ಷಿಣ ಕಾಶಿ ನಿಡಗಲ್ ದುರ್ಗದ ಮಹಾದ್ವಾರ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದರು.
ಕಳೆದ ಅನೇಕ ವರ್ಷಗಳ ಸತತ ಪ್ರಯತ್ನದ ಬಳಿಕ ಇದೇ ಸೆ.2026ರಲ್ಲಿ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ ಹರಿಬಿಡಲಾದ 3ಟಿಎಂಸಿ ನೀರು ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಯಶಸ್ವಿಯಾಗಿ ಸಾಗಿ ಗೊನೂರು ಕೆರೆ ತಲುಪಿದ್ದು ಸಂತಸ ತಂದಿದೆ. 1907ರಲ್ಲಿ ನಿರ್ಮಿಸಿದ್ದ ಐತಿಹಾಸಿಕ ಹಿನ್ನೆಲೆಯ ಚಿತ್ರದುರ್ಗ ಜಿಲ್ಲೆ ಚಳ್ಳಕರೆ ತಾಲೂಕಿನ ದುರ್ಗಾವರ ವ್ಯಾಪ್ತಿ ಮೀರಾಸಾಬಿಹಳ್ಳಿ ಬೃಹತ್ ರಾಣಿಕೆರೆಗೆ ನೀರು ಹರಿಬಿಡಲಿದ್ದು, ಆ ಬಳಿಕ ವೇದಾವತಿ ನದಿ ಮೇಲ್ಭಾ ಗದ ಚಳ್ಳಕರೆ ತಾಲೂಕಿನ 21ಕೆರೆ ಹಾಗೂ ಹೊರಗಿನ ಪಾವಗಡ ತಾಲೂಕಿನ 25ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸಲಾಗುವುದೆಂದು ಹೇಳಿದರು.ಈಗಾಗಲೇ ಭದ್ರಾ ಜಲಾಶಯದಿಂದ ಹರಿಬಿಟ್ಟ ನೀರು ತರೀಕೆರೆ, ಅಜ್ಜಂಪುರ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮಾರ್ಗವಾಗಿ ಸುಮಾರು 164 ಕಿಲೋಮೀಟರ್ ಸಂಚರಿಸಿ ಗೊನೂರು ಕೆರೆಗೆ ತಲುಪಿದೆ. ಶೀಘ್ರ ಈ ಭಾಗಕ್ಕೆ ನೀರು ಹರಿಯಲಿದೆ ಎಂದ ಅವರು, ಇಲ್ಲಿನ ಜನತೆಯ ಮನವಿ ಪರಿಶೀಲಿಸಿದ್ದೇನೆ. ಮುಂದಿನ ಮೇ ಅಂತ್ಯದೊಳಗೆ ಭದ್ರಾ ಯೋಜನೆ ನೀರು ತಾಲೂಕಿನ ಕೆರೆಗಳಿಗೆ ಬರುವ ಎಲ್ಲ ಸಾಧ್ಯತೆಗಳಿರುವುದಾಗಿ ತಿಳಿಸಿದರು.
ಸಿಎಂ ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರದ ಜನತೆ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದು, ನೀರಾವರಿ ಸೇರಿ ಇತರೆ ಜನಪರ ಯೋಜನೆಗಳ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿದೆ. ನಾಯಕ ಸಮುದಾಯ ಸಂಘಟಿತವಾಗಿ ಶೈಕ್ಷಣಿಕ ಹಾಗೂ ಇತರೆ ಎಲ್ಲ ರಂಗಗಳಲ್ಲಿಯೂ ಪ್ರಗತಿ ಕಾಣಬೇಕು. ಮಹಿರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗೂ ಮಹಾದ್ವಾರದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿ,ತಂದೆ ಮಾಜಿ ಸಚಿವ ವೆಂಕಟರಮಣಪ್ಪ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯ ಹಾಗೂ ತಾವು ಶಾಸಕರಾದ ಬಳಿಕ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ.ಸರ್ಕಾರದ ಕೋಟ್ಯಂತರ ರುಗಳ ಅನುದಾನ ವಿನಿಯೋಗಿಸಿ ಗ್ರಾಮೀಣ ರಸ್ತೆ ಸಂಪರ್ಕ,ಸಮುದಾಯದ ಭವನಗಳ ನಿರ್ಮಾಣ,ಶಾಲಾ ಕಾಲೇಜು ಹಾಗೂ ಕೊಠಡಿಗಳ ಪ್ರಗತಿಗೆ ನೀಡಿದ ಅದ್ಯತೆ ಕುರಿತು ವಿವರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ಇರುವ ಸಮಸ್ಯೆ ನಿವಾರಣೆಗೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಭರದಿಂದ ಪೈಪುಲೈನ್ ಕಾಮಗಾರಿ ನಡೆಯುತ್ತಿದೆ. ನಾಯಕ ಸಮುದಾಯ ಸೇರಿದಂತೆ ಇತರೆ ಎಲ್ಲ ಸಮುದಾಯಗಳ ಪ್ರಗತಿಗೆ ವಿವಿಧ ಯೋಜನೆ ಅಡಿ ವಿಶೇಷ ಒತ್ತು ನೀಡಿರುವುದಾಗಿ ಹೇಳಿದರು.ಇದೇ ವೇಳೆ ಎಸ್ಟಿ ಜನಾಂಗದ ಪ್ರಗತಿಗೆ 150ಕ್ಕೂ ಹೆಚ್ಚು ಕೊಳವೆಬಾವಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಕಲ್ಪಿಸಿಕೊಡುವಂತೆ ಸಚಿವರಲ್ಲಿ ಮಾಡಲಾಯಿತು.
ರಾಜನಹಳ್ಳಿ ಮಹರ್ಷಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅರ್ಶೀವಾಚನ ನೀಡಿಡಿದರು. ನಿಡಗಲ್ ಸಂಸ್ಥಾನದ ಸಂಜಯ್ ಕುಮಾರ ಸ್ವಾಮೀಜಿ, ಮಾಜಿ ಶಾಸಕರಾದ ರಾಜ ವೆಂಕಟಪ್ಪನಾಯಕ, ಚಿತ್ರದುರ್ಗ ಮದಕರಿ ವಂಶಸ್ಥರಾದ ರಾಜ ಪ್ರಸನ್ನ ನಾಯಕ, ಪಿಎಂಜಿಎಸ್ವೈ ಎಕ್ಸಿಕ್ಯೂಟಿವ್ ಎಂಜಿನಿಯರ್ ಪಾವಗಡದ ಅನಿಲ್ ಕುಮಾರ್, ಸಿಪಿಐ ಸುರೇಶ್ ಗೌಡ, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಚ್.ರಾಜೇಶ್, ಎಪಿಎಂಸಿ ಸಿದ್ದಗಂಗಪ್ಪ, ಕೆ,ರಾಮಪುರ ಆನಂದ್, ಲೋಕೇಶ್ ಪಾಳೇಗಾರ, ಒಂಕಾರ ನಾಯಕ ಹಾಗೂ ಇತರೆ ಅನೇಕ ಮಂದಿ ನಾಯಕ ಸಮುದಾಯದ ಮುಖಂಡರು ಹಾಗೂ ಕಾರ್ಯಕ್ರಮದ ಆಯೋಜಕರಿದ್ದರು.