ಭದ್ರಾ ಮೇಲ್ದಂಡೆ ಕೆಲಸ ಮಾಡಿದ್ದು ಕಾಂಗ್ರೆಸ್‌: ಶಾಸಕ ಬಿ.ಜಿ.ಗೋವಿಂದಪ್ಪ

| Published : Apr 18 2024, 02:21 AM IST

ಸಾರಾಂಶ

ಶಾಸಕ ಬಿ.ಜಿ.ಗೋವಿಂದಪ್ಪ, ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದಾಗ ಎಷ್ಟುಭಾರಿ ಭದ್ರಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೀರಾ, ಬಿಜೆಪಿ ಅವಧಿಯ 4 ವರ್ಷಗಳಲ್ಲಿ 1.5 ಕೀಮೀ ಚಾನೆಲ್‌ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಕಾರಜೋಳರಿಗೆ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಭದ್ರಾ ಮೇಲ್ದಂಡೆ ಯೋಜನೆ ಕೆಲಸ ಮಾಡಿದ್ದು ಕಾಂಗ್ರೆಸ್‌ ಸರ್ಕಾರವೇ ಹೊರೆತು ಬಿಜೆಪಿ ಅಲ್ಲ. ಬಿಜೆಪಿಯವರಿಗಿಂತ ಕಾಂಗ್ರೆಸ್‌ ಸರ್ಕಾರ ಭದ್ರಾ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಕೆಲಸ ಮಾಡಿದೆ. ಈ ಬಗ್ಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ. ನಿಮಗೆ ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಸವಾಲು ಹಾಕಿದರು.

ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಹಾಗೂ ಹೊಸದುರ್ಗ ತಾಲೂಕಿನ ಶ್ರೀರಾಂಪುರದಲ್ಲಿ ಈಚೇಗೆ ನಡೆದಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಾಗಿಲ್ಲ, ಹಾಳು ಮಾಡಿದ್ದಾರೆ. ಭದ್ರಾ ಯೋಜನೆಗೆ ಕಾಂಗ್ರೆಸ್‌ ಯಾವುದೇ ಕೊಡುಗೆ ನೀಡಿಲ್ಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು.

ಈ ಹೇಳಿಕೆ ಸಂಬಂಧ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದಾಗ ಎಷ್ಟುಭಾರಿ ಭದ್ರಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೀರಾ, ಬಿಜೆಪಿ ಅವಧಿಯ 4 ವರ್ಷಗಳಲ್ಲಿ 1.5 ಕೀಮೀ ಚಾನೆಲ್‌ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಿಜೆಪಿ ಅವಧಿಯಲ್ಲಿ ಎಷ್ಟುಕೆಲಸ ಆಗಿದೆ ಎಂಬುದನ್ನು ಉತ್ತರಿಸಬೇಕು. ಜಿಲ್ಲೆಯಲ್ಲಿ ಯಾವುದೇ ಕೆಲಸ ಆಗಿಲ್ಲ ಎನ್ನುವ ಉದ್ಧಟತನ ಮಾತುಗಳನ್ನು ಖಂಡಿಸುತ್ತೇನೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದರು.

ಭದ್ರಾ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು. ₹5300 ಕೋಟಿ ಅನುದಾನ ಕೊಡುವುದಾಗಿ ಹೇಳಿ ವಚನ ಭ್ರಷ್ಟರಾಗಿದ್ದೀರಾ. ಹಿಂದಿನ ಸಂಸದ ನಾರಾಯಣಸ್ವಾಮಿ 5 ವರ್ಷದಲ್ಲಿ ರೈಲ್ವೆ ಬ್ರಿಡ್ಜ್‌ ಕೆಳಗೆ 100 ಮೀಟರ್‌ ಕೆಲಸ ಮಾಡಿಸಿದ್ದು ಬಿಟ್ಟರೇ ಯಾವುದೇ ಕೆಲಸ ಮಾಡಿಲ್ಲ. ಈವರೆಗೂ ಭದ್ರಾ ಯೋಜನೆಗೆ ₹9500 ಕೋಟಿ ಖರ್ಚಾಗಿದೆ. ಕಾಂಗ್ರೆಸ್‌ ಸರಕಾರ ₹6500 ಕೋಟಿ ಅನುದಾನ ನೀಡಿದ್ದರೆ, ಬಿಜೆಪಿ ₹3000 ಕೋಟಿ ಅನುದಾನ ನೀಡಿದೆ. ಆದರೆ, ಸಂಪೂರ್ಣ ಹಣ ನಾವೇ ನೀಡಿದ್ದೇವೆಂಬ ಸುಳ್ಳು ಆಪಾದನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಭದ್ರಾ ಚಾನಲ್‌ ಪ್ರಗತಿ ಕಾರ್ಯ ನಿಂತುಹೋಗಿತ್ತು. ಜನರಿಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ಜಿಲ್ಲೆ ಜನರ ಮತ ಕೇಳಲು ಬಂದಿದ್ದೀರಿ. ನಾಲಿಗೆ ಮೇಲೆ ನಿಮಗೆ ಹಿಡಿತವಿರಲಿ. ಜಿಲ್ಲೆ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ತಾಕತ್ತಿದ್ದರೆ ಚರ್ಚೆಗೆ ಬನ್ನಿ. ನೀವು ಎಷ್ಟು ಪ್ರಾಮಾಣಿಕರು ಎಂಬುದು ಸರಕಾರಕ್ಕೆ ತಿಳಿದಿದೆ. ಚಿತ್ರದುರ್ಗ ಹಾಳಾಗಿದೆ ಎಂಬ ನಿಮ್ಮ ಉದ್ಧಟತನದ ಮಾತು ಬಿಡಿ ಎಂದು ಎಚ್ಚರಿಸಿದರು.

ಬಿಜೆಪಿ ಪಕ್ಷದ 25 ಲೋಕಸಭಾ ಸದಸ್ಯರು ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದರು. ಒಂದು ದಿನವೂ ಕೂಡ ರೈತರ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಸಂಸತ್ತಿನಲ್ಲಿ ಮಾತನಾಡಿಲ್ಲ. ಈಗ ಚುನಾವಣೆ ಸಮಯದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಹೊಸದುರ್ಗ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪದ್ಮನಾಭ್‌, ಪ್ರಚಾರ ಸಮಿತಿ ಅಧ್ಯಕ್ಷ ರಾಜಣ್ಣ, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್‌, ಅಲ್ತಾಫ್‌ ಪಾಷಾ, ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಸತೀಶ್‌, ಮುಖಂಡರಾದ ಗೋ ತಿಪ್ಪೇಶ್‌, ಕಾರೇಹಳ್ಳಿ ಬಸವರಾಜ್‌, ಕೆ.ಸಿ.ನಿಂಗಪ್ಪ, ಎಂ.ಎಚ್‌. ಕೃಷ್ಣಮೂರ್ತಿ, ಕೆಂಚಪ್ಪ ಮತ್ತಿತರಿದ್ದರು.