ಅಕ್ಟೋಬರ್ ಅಂತ್ಯಕ್ಕೆ ಚಿತ್ರದುರ್ಗ ಕಾಲುವೆಗೆ ಭದ್ರಾ ನೀರು

| Published : Jan 27 2024, 01:15 AM IST

ಸಾರಾಂಶ

ಜಿಲ್ಲೆಯ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ಬರದ ನಾಡು ಹಸಿರು ನಾಡಾ ಗುವ ದಿನಗಳು ಕ್ಷಣಗಣನೆಯಲ್ಲಿವೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕಾಲುವೆ ನಿರ್ಮಾಣಕ್ಕೆ ತೊಡಕಾಗಿರುವ ಎಲ್ಲ ಸಮಸ್ಯೆ ನಿವಾರಿಸಿ ಕಾಮಗಾರಿಗೆ ಚುರುಕಿನ ವೇಗ ನೀಡಿ ಅಕ್ಟೋಬರ್ ಅಂತ್ಯದಲ್ಲಿ ಚಿತ್ರದುರ್ಗ ಕಾಲುವೆಗೆ ಭದ್ರಾ ನೀರು ಹರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಲಾದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಜಿಲ್ಲೆಯ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ಬರದ ನಾಡು ಹಸಿರು ನಾಡಾಗುವ ದಿನಗಳು ಕ್ಷಣಗಣನೆಯಲ್ಲಿವೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ಪೂರ್ಣಗೊಳಿಸಲು ಇರುವ ಕೆಲವೇ ತಾಂತ್ರಿಕ ತೊಡಕುಗಳನ್ನು ಸ್ಥಳದಲ್ಲಿಯೇ ನಿವಾರಿಸಲು ಕೋರಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇವರನ್ನು ಕೋರಲಾಗಿದೆ. ಈ ತಿಂಗಳಾಂತ್ಯದೊಳಗೆ ಭೇಟಿ ನೀಡಿ ಉಪಮುಖ್ಯಮಂತ್ರಿಗಳು ಪರಿವೀಕ್ಷಣೆ ಮಾಡುವರು ಎಂದರು.

ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ಹೊನಲು ಬೆಳಕು ವ್ಯವಸ್ಥೆ, ಚಂದ್ರವಳ್ಳಿ ತೋಟ ನವೀಕರಣ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು 29 ಕೋಟಿ ರು.ಗಳ ಅಂದಾಜಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಗೆ ಅಂತಿಮ ರೂಪುರೇಷೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಬಹುದಿನದ ಕನಸಾದ ಸರ್ಕಾರಿ ಮೆಡಿಕಲ್ ಕಾಲೇಜು 2023-24ನೇ ಸಾಲಿನಿಂದ ಪ್ರಾರಂಭವಾಗಿದೆ. 150 ವಿದ್ಯಾರ್ಥಿಗಳು ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್ ತರಗತಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು. ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಬರ ನಿರ್ವಹಣೆಗೆ ಸರ್ಕಾರದಿಂದ ರೂ.9 ಕೋಟಿಗಳ ಹಣ ಬಿಡುಗಡೆಯಾಗಿದೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಬೋರ್‍ವೆಲ್‍ಗಳನ್ನು ಕೊರೆಯಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿರುವ ಎಲ್ಲಾ ಹೋಬಳಿಗಳಲ್ಲಿ ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ ಎಂದರು.

ಕೂಸಿನ ಮನೆ ಅನಾವರಣ: ನರೇಗಾದಡಿ ಕೂಲಿ ಕಾರ್ಮಿಕರಾಗಿ ದುಡಿಯುವ ಹೆಣ್ಣುಮಕ್ಕಳ 3 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಿಸಲಾಗು ತ್ತಿರುವ ಕೂಸಿನ ಮನೆ ಕಾರ್ಯಕ್ರಮಕ್ಕೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಚಿವ ಡಿ.ಸುಧಾಕರ್ ಅನಾವರಣ ಮಾಡಿದರು. ಇದೇ ವೇಳೆ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಿದ ಜಿಲ್ಲೆಯ ವಿವಿಧ ಐದು ಆಸ್ಪತ್ರೆಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್‌ಪಿಐ ಹೆಚ್.ಡಿ.ರುದ್ರೇಶ್ ಪರೇಡ್ ಕಮಾಂಡರ್ ಅವರ ಮುಂದಾಳತ್ವದಲ್ಲಿ ಒಟ್ಟು 20 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ಏರ್ಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ದೇಶದ ಸಂಸ್ಕೃತಿ , ವಿವಿಧತೆ ಏಕತೆಯೊಂದಿಗಿನ ಸಮ್ಮಿಲನಕ್ಕೆ ಸಾಕ್ಷಿಯಾದವು. ಚಿತ್ರದುರ್ಗ ನಗರದ ಡಾನ್‍ಬಾಸ್ಕೋ ಶಾಲೆಯ 500 ವಿದ್ಯಾರ್ಥಿಗಳು ಹಾಗೂ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 200 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ದೇಶಭಕ್ತಿ ಗೀತೆಗಳ ಆಕರ್ಷಕ ನೃತ್ಯರೂಪಕ ನೋಡುಗರ ಮನಸೂರೆಗೊಂಡಿತು.ಶಾಸಕ ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪ್ರಭಾರ ಉವಿಭಾಗಾಧಿಕಾರಿ ವಿವೇಕ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.

ಕ್ಯಾಪ್ಸನ್: ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಚಿತ್ರದುರ್ಗದಲ್ಲಿ ಆಯೋಜಿಸಲಾದ 75 ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ಸ್ವೀಕರಿಸಿದರು.ಅಂತೂ ಶಾಸಕ ಪಪ್ಪಿ ಬಂದ್ರು!: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಅಗಮಿಸಿದ್ದು ನೆರೆದಿದ್ದವರ ಅಚ್ಚರಿಗೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ತ್ರೈಮಾಸಿಕ ಸಭೆ ಸೇರಿದಂತೆ ಇತರೆ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಅಭ್ಯಾಸ ರೂಢಿಸಿಕೊಂಡಿದ್ದ ಶಾಸಕ ವೀರೇಂದ್ರ ಪಪ್ಪಿ ಅದ್ಹೇಕೋ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಿ ಬದ್ಧತೆ ಪ್ರದರ್ಶಿಸಿದರು. ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ಸಚಿವ ಡಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ಮಾಡಲು ಮುಂದಾಗುತ್ತಿದ್ದಂತೆ ಶಾಸಕ ವೀರೇಂದ್ರ ಪಪ್ಪಿ ದೂರದಲ್ಲಿ ಬರುತ್ತಿದ್ದುದನ್ನು ಗಮನಿಸಿ ತಡಮಾಡಿದರು. 9 ಗಂಟೆ ಒಂದು ನಿಮಿಷಕ್ಕೆ ಧ್ವಜಾರೋಹಣ ನೆರವೇರಿಸಿದರು.