ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಅಣೆಕಟ್ಟೆಯ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಅನೇಕ ಪಟ್ಟಣ, ತಾಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿ ಕೈಗೊಂಡಿದ್ದು, ಇದೇ ಸ್ಥಿತಿ ಮುಂದುವರಿದರೆ ದಾವಣಗೆರೆ ಜಿಲ್ಲೆಯ ಜನತೆ ಹಾಗೂ ಅಚ್ಚುಕಟ್ಟು ರೈತರಿಗೆ ಇದು ಮರಣ ಶಾಸನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನೆರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ನಮ್ಮ ವಿರೋಧವಿಲ್ಲ. ಡ್ಯಾಂ ಹಿನ್ನೀರು ಅಥವಾ ನದಿ ಮೂಲದಿಂದ ನೀರು ಕೊಡಲಿ. ಆದರೆ, ಭದ್ರಾ ಬಲದಂಡೆ ನಾಲೆಯನ್ನು ಸೀಳಿ, ಭವಿಷ್ಯದಲ್ಲಿ ಭದ್ರಾ ಅಚ್ಚುಕಟ್ಟು ರೈತರ ಬದುಕಿನ ಮೇಲೆ ಮರಣ ಶಾಸನ ಬರೆಯಲು ಹೊರಟಿದ್ದರ ವಿರುದ್ಧ ನಮ್ಮ ಹೋರಾಟ ಎಂದರು.
ಡ್ಯಾಂನ ಬಲದಂಡೆ ನಾಲೆ ಬಳಿ ಕಾಮಗಾರಿ ಕೈಗೊಂಡ ಸ್ಥಳಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ ನೀಡಿ, ಪರಿಶೀಲಿಸಬೇಕು. ಭದ್ರಾ ಡ್ಯಾಂ ಬುಡದಲ್ಲೇ ಅಪಾಯಕಾರಿಯಾದ, ದಾವಣಗೆರೆ ಜಿಲ್ಲೆ ಜನರಿಗೆ ಮರಣಶಾಸನವಾದ ಕಾಮಗಾರಿಯನ್ನು ಶಾಶ್ವತವಾಗಿ ಬಂದ್ ಮಾಡಿಸಬೇಕು. ಇಲ್ಲಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.ಈಗಾಗಲೇ ಕರಪತ್ರ, ಹೆದ್ದಾರಿ ಬಂದ್ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಿದ್ದೇವೆ. ಒಕ್ಕೂಟದ ನೇತೃತ್ವದ ಹೋರಾಟಗಳು ಯಶಸ್ವಿಯಾಗಿವೆ. ಇನ್ನು ಮುಂದೆ ಪ್ರತಿ ಹಳ್ಳಿ ಹಳ್ಳಿಯಿಂದ ನಮ್ಮೆಲ್ಲಾ ರೈತರು, ಮಹಿಳೆಯರು, ಪುರುಷರು ದೊಡ್ಡ ಕ್ರಾಂತಿಗೆ ಮುಂದಾಗಬೇಕಿದೆ ಎಂದು ಹೇಳಿದರು.
ನಾಲೆ ಸೀಳಿ ಕಾಮಗಾರಿ ಕೈಗೊಂಡಿದ್ದ ವಿಚಾರ ಗೊತ್ತಾಗಿ ನಾವು ಸ್ಥಳಕ್ಕೆ ಹೋಗಿ, ವೀಕ್ಷಣೆ ಮಾಡದೇ ಇದ್ದಿದ್ದರೆ ನಮ್ಮ ಬಲದಂಡೆ ನಾಲೆಗೂ ನೀರು ಸಿಗುತ್ತಿರಲಿಲ್ಲ. ನಮ್ಮ ಹೋರಾಟದಿಂದ 1500 ಕ್ಯುಸೆಕ್ ನೀರು ಬಿಟ್ಟಿದ್ದಾರೆ. ಆದರೆ, ಗೇಟ್ ಅಳವಡಿಸಿದ್ದಾರೆ. ಇನ್ನು 6 ತಿಂಗಳಾದರೆ ನೆರೆ ಜಿಲ್ಲೆಗೆ ನೀರೊಯ್ಯುತ್ತಾರೆ. ಇದೇ ರೀತಿ ಆದರೆ ಈಗಎಡದಂಡೆ ರೈತರಿಗೆ ಆದ ಪರಿಸ್ಥಿತಿಯೇ ಬಲದಂಡೆ ನಾಲೆಯ ಅಚ್ಚಕಟ್ಟು ರೈತರಿಗೂ ಆಗುತ್ತಿತ್ತು. ಜಿಲ್ಲೆಯ ರೈತರು ಒಕ್ಕೂಟ ಕರೆ ನೀಡಿದಾಗ ಸ್ವಯಂ ಪ್ರೇರಣೆಯಿಂದ ಬಂದು, ಹೋರಾಟಕ್ಕೆ ಸಿದ್ದವಾಗಿರಬೇಕು ಎಂದರು.ಒಕ್ಕೂಟದ ಮುಖಂಡ ಲೋಕಿಕೆರೆ ನಾಗರಾಜ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಭದ್ರಾ ಡ್ಯಾಂನ ಐಸಿಸಿ ಸಭೆಗೆ ಇಬ್ಬರೂ ಹಾಜರಾಗುತ್ತಿಲ್ಲ. ಜಿಲ್ಲೆಯ ರೈತರು ಪ್ರತಿಭಟಿಸಿದಾಗ ನೆಪ ಮಾತ್ರಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದರು. ಆದರೆ, ಪೊಲೀಸ್ ಸರ್ಪಗಾವಲಿನಲ್ಲಿ ರಾತ್ರೋ ರಾತ್ರಿ ಕಾಮಗಾರಿ ಕದ್ದುಮುಚ್ಚಿ ಕೈಗೊಳ್ಳಲಾಗಿದೆ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ರಾಜು ತೋಟಪ್ಪನವರ ಇತರರು ಇದ್ದರು.ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕದನ ನಡೆದಿದ್ದು, ಗಂಡ-ಹೆಂಡತಿಯರಂತೆ ಜಗಳ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಸಮಸ್ಯೆ ಬಗ್ಗೆ ಚಿಂತನೆ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ, ಜಲ ಸಂಪನ್ಮೂಲ ಸಚಿವ, ಅಧಿಕಾರಿಗಳು, ದಾವಣಗೆರೆ ಜಿಲ್ಲಾ ಆಡಳಿತವು ಭದ್ರಾ ಅಚ್ಚುಕಟ್ಟು ರೈತರ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನೀರಿಗಾಗಿ ಕ್ರಾಂತಿ ಆದೀತು.
ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.