ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಈಗ 60 ರ ಸಂಭ್ರಮ. ಈ ಕೇಂದ್ರದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದ್ದು, ಈಗ ಇರುವ ಮಧ್ಯಮ ತರಂಗಾಂತರದಿಂದ (ಮೀಡಿಯಂ ವೇವ್) ಅದು ಫ್ರೀಕ್ವೆನ್ಸಿ ಮಾಡ್ಯುಲೇಷನ್ ಟ್ರಾನ್ಸ್ ಮಿಷನ್ (ಎಫ್.ಎಂ)ಗೆ ಬದಲಾಗುತ್ತಿದೆ.
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಈಗ 60 ರ ಸಂಭ್ರಮ. ಈ ಕೇಂದ್ರದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದ್ದು, ಈಗ ಇರುವ ಮಧ್ಯಮ ತರಂಗಾಂತರದಿಂದ (ಮೀಡಿಯಂ ವೇವ್) ಅದು ಫ್ರೀಕ್ವೆನ್ಸಿ ಮಾಡ್ಯುಲೇಷನ್ ಟ್ರಾನ್ಸ್ ಮಿಷನ್ (ಎಫ್.ಎಂ)ಗೆ ಬದಲಾಗುತ್ತಿದೆ.
ಕೇಂದ್ರದ ಮಾಹಿತಿ ಮತ್ತು ಪ್ರಸರಣ ಸಚಿವಾಲಯದಿಂದ 10 ಕೋಟಿ ರು. ವೆಚ್ಚದಲ್ಲಿ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ (ತರಂಗವಾಹಕ) ಅಳವಡಿಸಲು ಮುಂದಾಗಿದ್ದು, ಈಗಾಗಲೇ ಕೆನಡಾದಿಂದ 10 ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಶಿವಮೊಗ್ಗಕ್ಕೆ ಬಂದಿದೆ. ಇದರ ಪೂಜಾ ಕಾರ್ಯಕ್ರಮವನ್ನು ಜ.23ರಂದು ಕೇಂದ್ರದ ರಾಜ್ಯ ಮಾಹಿತಿ ಮತ್ತು ಪ್ರಸರಣಾ ಸಚಿವ ಡಾ.ಎಲ್.ಮುರುಗನ್ ಶಿವಮೊಗ್ಗಕ್ಕೆ ಬಂದು ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಪ್ರಸ್ತುತ ಭದ್ರಾವತಿಯಲ್ಲಿರುವ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಎಫ್.ಎಂ ಟ್ರಾನ್ಸ್ ಮೀಟರ್ ಎತ್ತರ 100 ಮೀಟರ್ ಇದ್ದು, ಶಿವಮೊಗ್ಗದಲ್ಲಿ ಸ್ಥಾಪಿಸಿರುವ ಟ್ರಾನ್ಸ್ ಮೀಟರ್ 150 ಮೀಟರ್ ಎತ್ತರದಲ್ಲಿದೆ. 10 ಕಿಲೋವ್ಯಾಟ್ ಟ್ರಾನ್ಸ್ ಮೀಟರ್ ಅಳವಡಿಸಿದರೆ ಪ್ರಸಾರ ಸಾಮರ್ಥ್ಯ 10 ಪಟ್ಟು ಹೆಚ್ಚಾಗಲಿದೆ. ಇದಲ್ಲದೆ ಈಗ ಪ್ರಸಾರವಾಗುತ್ತಿರುವ ಪ್ರಸಾರ ವ್ಯಾಪ್ತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿದ್ದು, ಇನ್ನು ಮುಂದೆ ಇದರ ಸ್ಥಾಪನೆಯೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿ ಮತ್ತು ಹಾಸನ, ಉಡುಪಿ, ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಯ ಕೆಲ ತಾಲೂಕು ವ್ಯಾಪ್ತಿಯಲ್ಲಿ ಆಕಾಶವಾಣಿ ಪ್ರಸಾರ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.ಶಿವಮೊಗ್ಗ ಜಿಲ್ಲೆ ಒಂದು ರೀತಿಯಲ್ಲಿ ಕರ್ನಾಟಕ ಮಧ್ಯ ಭಾಗವಾಗಿದ್ದು, ಇದರ ಪ್ರಸಾರವನ್ನು ಅರ್ಧ ಕರ್ನಾಟಕದ ಅನೇಕ ಪ್ರದೇಶದಲ್ಲಿ ಕೇಳಬಹುದಾಗಿದೆ. ಇದರಿಂದ ಆಕಾಶವಾಣಿ ಕಾರ್ಯಕ್ರಮದ ಮೆರಗು ಹೆಚ್ಚಲಿದ್ದು, ಆಕಾಶವಾಣಿ ಕಾರ್ಯಕ್ರಮಗಳಿಂದ ಲಕ್ಷಾಂತರ ಕೇಳುಗರಿಗೆ ಲಾಭವಾಗಲಿದೆ.
ಶಿವಮೊಗ್ಗಕ್ಕೆ 10 ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಒದಗಿಸಲು ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ತಿಳಿಸಿದ್ದಾರೆ.