ಭದ್ರಾವತಿ: ಮೃತಪಟ್ಟ ಚಿರತೆ ಪತ್ತೆ

| Published : Jan 28 2025, 12:46 AM IST

ಸಾರಾಂಶ

ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ೨ ರಿಂದ ೩ ವರ್ಷದ ಗಂಡು ಚಿರತೆಯ ಮೃತದೇಹವಾಗಿದ್ದು, ಇದು ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಚಿರತೆ ಎಂಬುದು ತಿಳಿದು ಬಂದಿದೆ. ಈ ಚಿರತೆ ಸೇತುವೆ ಮೇಲಿಂದ ಬಿದ್ದು ಸಾವನ್ನಪ್ಪಿದೆಯೋ ಅಥವಾ ಬೇಟೆಯಾಡಿ ಹತ್ಯೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಬಿ.ಎಚ್.ದುಗ್ಗಪ್ಪ, ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿವೆ. ಬೆಳಿಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚಿರತೆ ಇದೆ ದಿನ ಮೃತಪಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಚಿರತೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು. ಘಟನಾ ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ಕಚೇರಿಯ ಸಿಬ್ಬಂದಿ, ಪೇಪರ್ ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.