ಭಾಗಮಂಡಲ: ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವ ಸಂಪನ್ನ

| Published : Jul 25 2025, 12:42 AM IST / Updated: Jul 25 2025, 12:50 AM IST

ಸಾರಾಂಶ

ಕಾವೇರಿ ಕನ್ನಿಕೆ, ಸುಜ್ಯೋತಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಬಾಳೆ ದಿಂಡಿನಿಂದ ಸಿದ್ಧಗೊಂಡ ಸುಮಂಗಲಿ ಮಂಟಪವನ್ನು ನಾಡಿನ ಸುಬಿಕ್ಷೆಗಾಗಿ ಪ್ರಾರ್ಥಿಸಿ ತೇಲಿ ಬಿಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪೊಲಿಂಕಾನ ಉತ್ಸವ, ವಿಶೇಷ ಪೂಜೆ ಕೈಂಕರ್ಯದೊಂದಿಗೆ ಗುರುವಾರ ನೆರವೇರಿತು.

ಮಹಾಗಣಪತಿ, ಮಹಾವಿಷ್ಣು, ಸುಬ್ರಮಣ್ಯ, ಭಗಂಡೇಶ್ವರ ಗುಡಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಬಾಳೆ ದಿಂಡಿನಿಂದ ಸಿದ್ಧಗೊಂಡ ಸುಮಂಗಲಿ ಮಂಟಪಕ್ಕೆ ದೇವಾಲಯದ ಪ್ರದಕ್ಷಿಣೆ ಬಂದ ನಂತರ ದೀಪ ಬೆಳಗಿ, ಮುತೈದೆ ಆಭರಣಗಳಾದ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿ ತಟ್ಟೆ ಸೇರಿದಂತೆ ಹೂವು ಹಣ್ಣುಗಳಿಂದ ಅಲಂಕರಿಸಿ ಮತ್ತೆ ಪ್ರದಕ್ಷಿಣೆ ಬಂದು ಮುಖ್ಯದ್ವಾರದ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಕಾವೇರಿ ಕನ್ನಿಕೆ, ಸುಜ್ಯೋತಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಕಾವೇರಿ ಶಾಂತಳಾಗಿ, ಮಳೆಗಾಲದಲ್ಲಿ ಯಾವುದೇ ಹಾನಿ ಮಾಡದೇ ರೈತರಿಗೆ ಸುಬಿಕ್ಷೆಯಾಗಲಿ ಎಂದು ಪೂಜೆ ಸಲ್ಲಿಸಿ ಮಂಟಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು.

ಈ ವೇಳೆ ತಲಕಾವೇರಿ - ಭಾಗಮಂಡಲ ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥರು, ಪ್ರಧಾನ ಅರ್ಚಕರು, ಸ್ಥಳೀಯ ಭಕ್ತರು ಹಾಜರಿದ್ದರು.