ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಗೆ ಬದ್ಧರಾಗಿದ್ದರು ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ತಿಳಿಸಿದರು.ವಿಜಯಪುರ ಪಟ್ಟಣದ ಸಮೀಪದಲ್ಲಿರುವ ಚಿಕ್ಕಮರಳ್ಳಿ ಗ್ರಾಮದ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಗಾಂಧಿ ಅಧ್ಯಯನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯದ ಹೆಜ್ಜೆಗಳು ಎಂಬ ವಿಷಯದ ಕುರಿತು ನಡೆಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸತ್ಯ ಎಂದರೆ ಧರ್ಮ. ಅಹಿಂಸೆ ಎಂದರೆ ಎಲ್ಲರನ್ನೂ ಪ್ರೀತಿಸು ಎಂಬ ವಿಷಯವನ್ನು ಪ್ರಪಂಚಕ್ಕೆ ಪರಿಚಯಿಸಿ ಕೊಟ್ಟ ಮಹಾತ್ಮಾ ಗಾಂಧಿಯವರು ವಿಶ್ವದ ಅನೇಕ ಅಂತಾರಾಷ್ಟ್ರೀಯ ನಾಯಕರ ಮೇಲೆ ಪ್ರಭಾವ ಬೀರಿದ್ದರು. ಗಾಂಧೀಜಿ ಹೋರಾಟ ವಿಶ್ವದ ವಿವಿಧ ನಾಯಕರಿಗೆ ಸ್ಫೂರ್ತಿಯಾಯಿತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೇಮ್ಸ್ ಬೆವ್ ಮತ್ತು ಜೇಮ್ಸ್ ಲಾಸನ್, ಇದಲ್ಲದೆ ನೆಲ್ಸನ್ ಮಂಡೇಲಾ ಅವರ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಭಾವ ಬೀರಿದ್ದರು. ಆದ್ದರಿಂದ ಮಹಾತ್ಮ ಗಾಂಧೀಜಿಯ ವಿಚಾರಧಾರೆಗಳು ಮತ್ತು ತತ್ವಗಳು ಇಂದಿಗೂ ಜೀವಂತವಾಗಿವೆ ಎಂದರು.
ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಪ್ರಾಂಶುಪಾಲೆ ಡಾ.ಎನ್. ಆನಂದಮ್ಮ ಮಾತನಾಡಿ, ಶಾಂತಿಯಿಂದಲೇ ಈ ಜಗದ ಜನರ ಹೃದಯ ಗೆದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಂದಿನಿಂದ ಇಂದಿನವರೆಗೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಸದಾ ಜಾಗೃತವಾಗಿರುವ ಒಂದು ಶಕ್ತಿಯಾಗಿದ್ದಾರೆ. ಗ್ರಾಮಗಳ ಉದ್ಧಾರ ಮತ್ತು ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ ಎನ್ನುವ ಸರಳ ಮತ್ತು ವೈಜ್ಞಾನಿಕ ಆರ್ಥಿಕ ನೀತಿಯನ್ನು ನಮಗೆ ಕೊಟ್ಟವರು ಮತ್ತು ನುಡಿದಂತೆ ನಡೆಯುವುದು ಗಾಂಧಿ ಅವರ ಬದುಕಾಗಿತ್ತು ಎಂದು ತಿಳಿಸಿದರು.ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪುಸ್ತಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಯು.ಐಶ್ವರ್ಯ ಪ್ರಥಮ ಸ್ಥಾನ, ಬೆಂಗಳೂರಿನ ಹಸನತ್ ಮಹಿಳಾ ಕಾಲೇಜಿನ ಆರ್.
ಸುಮಯ್ಯ ಸಿದ್ಧಿಕ್ ಆರ್,ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್.ಭವ್ಯಶ್ರೀ ಪಡೆದರು.ವೀಣಾ ಶಿವಪ್ಪಾ ಠಬ್ಬಣ್ಣವರ,ಸರ್ಕಾರಿ ಪದವಿ ಕಾಲೇಜು, ಹುಕ್ಕೇರಿ ಮತ್ತು ಎನ್.ಎಚ್.ರಿಶಿತಾ ಶೇಷಾದ್ರಿಪುರಂ ಡಿಗ್ರಿ ಕಾಲೇಜು ಮೈಸೂರು. ಇವರು ಸಮಾಧಾನಕರ ಬಹುಮಾನ ಸ್ವೀಕರಿಸಿದರು. ಶ್ವೇತಾ ಹಾಗೂ ತಂಡದವರಿಂದ ರಾಮ ನಾಮದ ಭಜನೆ ನಡೆಯಿತು.
ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕಿ ಎನ್.ಲಕ್ಷ್ಮೀ ದೇವಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ದೊಡ್ಡಬಳ್ಳಾಪುರದ ಧಾರ್ಮಿಕ ಚಿಂತಕ ವೀರಭದ್ರಯ್ಯ, ದೇವನಹಳ್ಳಿಯ ಲಯನ್ ಸಂಸ್ಥೆಯ ಪದಾಧಿಕಾರಿ ಮುನಿರಾಜು, ಸಹಾಯಕ ಪ್ರಾಧ್ಯಾಪಕಿ ಬಿ. ವಿ ಶೋಭಾ, ಶ್ವೇತಾ,ಅಭಿಜಿತ್, ಕಾರ್ಯಕ್ರಮ ನಿರೂಪಕಿ ಶ್ರಾವಣಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.