ಭಗವದ್ಗೀತೆ ಹಿಂದುಗಳ ಹೆಮ್ಮೆಯ ಗ್ರಂಥ

| Published : Nov 10 2024, 01:40 AM IST

ಸಾರಾಂಶ

ಈ ವರ್ಷ ಭಗವದ್ಗೀತೆಯ 9ನೇ ಅಧ್ಯಾಯ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗೆ ಗೀತೆಯ ಕುರಿತಾದ ವಿವಿಧ ವಿಷಯಗಳನ್ನು ನೀಡಲಾಗಿದೆ

ಗದಗ: ಆಧುನಿಕ ಆತಂಕಕಾರಿ ಜೀವನ ಶೈಲಿಯಲ್ಲಿ ಮನಸ್ಸಿಗೆ ಶಾಂತಿ ಮತ್ತು ಜ್ಞಾನ ನೀಡುವ ಹಿಂದೂಗಳ ಹೆಮ್ಮೆಯ ಗ್ರಂಥ ಭಗವದ್ಗೀತೆ ಸರ್ವರು ಪಾರಾಯಣ ಮಾಡಬೇಕೆಂದು ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಎಸ್. ಸಾಲಿಮಠ ಹೇಳಿದರು.

ನಗರದ ಜ. ನಂದೀಶ್ವರ ಮಠದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಶ್ರೀಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಿದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಮಾನವ ವಿವಿಧ ರೀತಿಯಿಂದ ಅನೇಕ ಮಾನಸಿಕ ವಿಕೃತಿಗಳಿಗೆ ಬಲಿಯಾಗುತ್ತಿದ್ದಾನೆ. ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ ಈ ಆಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ. ಗೀತೆಯ ಮೂಲಕ ಸಮಾಜದಲ್ಲಿ ಸುಖ-ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ರೂಪಿಸುವುದಕ್ಕಾಗಿ ಶ್ರೀಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸ್ವಾಮಿಗಳ 2007 ರಿಂದ ನಾಡಿನಾದ್ಯಂತ ಭಗವದ್ಗೀತಾ ಅಭಿಯಾನ ಪ್ರಾರಂಭಿಸಿದ್ದಾರೆ. ಈ ವರ್ಷವೂ ಭಗವದ್ಗೀತಾ ಅಭಿಯಾನದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿಲ್ಲಾ ಭಗವದ್ಗೀತಾ ಅಭಿಯಾನ ಸಂಚಾಲಕ ವಿದ್ವಾನ್‌ ಗಣಪತಿ ಗಾಂವಕರ ಮಾತನಾಡಿ, ಈ ವರ್ಷ ಭಗವದ್ಗೀತೆಯ 9ನೇ ಅಧ್ಯಾಯ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗೆ ಗೀತೆಯ ಕುರಿತಾದ ವಿವಿಧ ವಿಷಯಗಳನ್ನು ನೀಡಲಾಗಿದೆ. ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಡಿಸೆಂಬರ್ ನಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸದ್ಭಕ್ತರು ಪಾಲ್ಗೊಳ್ಳಬೇಕೆಂದರು. ಈ ವೇಳೆ ರಾಜೇಶ್ವರಿ ಶೆಟ್ಟರ್‌, ರೇಣುಕಾ ಅಮಾತಿ, ಮಳಿಶಾಂತಪ್ಪ ಮಾಸಣಗಿ ಸೇರಿದಂತೆ ಇತರರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ಸ್ವಾಗತಿಸಿದರು. ಅಮರೇಶ ರಾಂಪೂರ ನಿರೂಪಿಸಿ ವಂದಿಸಿದರು.