ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇತ್ತೀಚೆಗೆ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಜನರ ಮಾನಸಿಕತೆ ಸುಧಾರಿಸಬೇಕಿದೆ. ಅಪರಾಧ ಕೃತ್ಯಗಳು ನಡೆಯದಂತೆ ಪರಿವರ್ತನೆಯನ್ನು ಭಗವದ್ಗೀತೆ ತರುತ್ತದೆ. ಕಾಮ, ಕ್ರೋಧಗಳನ್ನು ನಿಯಂತ್ರಣದಲ್ಲಿರುವ ಕುರಿತು ಭಗವದ್ಗೀತೆ ಕಲಿಸಲಿದೆ. ಈ ಚಿಂತನೆಗಳಿಂದ ಭಗವದ್ಗೀತೆ ಅಭಿಯಾನ ಶುರುವಾಗಿದೆ. 2007ರಿಂದ ಅಭಿಯಾನ ನಡೆಯುತ್ತಿದ್ದು, ಈ ಬಾರಿ ವಿಜಯಪುರದಲ್ಲಿ 17ನೇ ರಾಜ್ಯಮಟ್ಟದ ಅಭಿಯಾನ ನಡೆದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.ಶಿರಸಿಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ನಗರದ ಸಾಯಿ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2024 ರಾಜ್ಯಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ 1633 ಶ್ಲೋಕ ಕೇಂದ್ರಗಳಾಗಿದ್ದು, ಈ ಬಾರಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ರಾಜ್ಯಮಟ್ಟದ ಸಮಗ್ರ ಗೀತಾ ಪಠಣ, ಅಭಿಯಾನ ನಡೆದಿದೆ. ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಹರಿಕಾರರಾಗಿ ಮಾದರಿಯಾಗಿದ್ದಾರೆ. ಅದರಂತೆ 21ನೇ ಶತಮಾನದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮಹಾನ ಪುರುಷರಾಗಿದ್ದು, ಅವರು ಸರ್ವಾಂತರಯಾಮಿಯಾಗಿದ್ದಾರೆ. ಅವರಲ್ಲಿನ ಸರಳತೆ, ಆದರ್ಶ, ವಿಚಾರಶುದ್ಧಿ ಇದೆ. ಇದನ್ನೇ ಭಗವದ್ಗೀತೆಯೂ ಹೇಳುತ್ತದೆ. ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸತ್ವ ಮುಖ್ಯ ಎಂದರು.
ಜಿಲ್ಲೆಯಲ್ಲಿ ಭಗವದ್ಗೀತೆ ಮತ್ತು ಸಾಮಾಜಿಕ ಸಾಮರಸ್ಯ, ಭಗವದ್ಗೀತೆ ಮತ್ತು ಆಯುರ್ವೇದ, ಭಗವದ್ಗೀತೆ ಮತ್ತು ಕಾನೂನು ಎಂಬ ಮೂರು ಕಾರ್ಯಾಗಾರಗಳನ್ನು ಮಾಡಲಾಗಿದ್ದು, ಇದು ಜಿಲ್ಲೆಯಲ್ಲಿ ಐತಿಹಾಸಿಕ ದಾಖಲೆ ಸೃಷ್ಠಿಸಿದೆ. ಇನ್ನು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷ ಉಮೇಶ ಕಾರಜೋಳ ಅವರು 15 ಸಾವಿರ ಭಗವದ್ಗೀತೆ ಪುಸ್ತಕಗಳನ್ನು ಹಂಚಿದ್ದಾರೆ. ಮಹಾಸಮರ್ಪಣೆ ಎಂದರೆ ನಾವು ಮಾಡುವ ಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದಾಗಿದೆ. ಜಿಲ್ಲೆಯ ಸಂತರು, ಮಠಾಧೀಶರು, ಜನಪ್ರತಿನಿಧಿಗಳು ಸಹಕಾರ ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳು ಭಗವದ್ಗೀತೆಯ ಅಭಿಯಾನವನ್ನು ನಡೆಸಿದ್ದಾಗಿ ತಿಳಿಸಿದರು.ನಗರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಮಾತನಾಡಿ, ಭಗವದ್ಗೀತೆಯ 9ನೇ ಅಧ್ಯಾಯ ಪಠಣ ಮಾಡುವುದರಿಂದ ಎಲ್ಲ ಮಕ್ಕಳನ್ನು ಒಂದೆಡೆ ನೋಡಲು ಅವಕಾಶ ಸಿಕ್ಕಂತಾಗಿದೆ. ಭಗವದ್ಗೀತೆಯೂ ಹೆತ್ತವರ ಮೇಲೆ, ದೇಶದ ಮೇಲೆ ಭಕ್ತಿ ಕಲಿಸುತ್ತದೆ, ಆಚಾರ ವಿಚಾರ ಕಲಿಸುತ್ತದೆ. ಭಗವದ್ಗೀತೆಯಲ್ಲಿ ಭಕ್ತಿ, ಜ್ಞಾನ, ವೈರಾಗ್ಯ, ಕರ್ತವ್ಯ ವಿದೆ. ಸ್ವಾಮೀಜಿ ತಮ್ಮ ಕರ್ತವ್ಯ ಮಾಡಿದರೆ ಧರ್ಮ ರಕ್ಷಣೆ ಆಗಲಿದೆ. ಒಬ್ಬ ಶಿಕ್ಷಕ ಜ್ಞಾನವನ್ನು ಮಕ್ಕಳಿಗೆ ಕೊಟ್ಟಾಗ ಆ ಮಕ್ಕಳು ಆದರ್ಶ ಪ್ರಜೆ ಆಗಲು ಸಾಧ್ಯವಾಗಲಿದೆ. ಮಕ್ಕಳಿಗೆ ಭಗವದ್ಗೀತೆ, ಉಪನಿಷತ್ತುಗಳು, ಸಾಹಿತ್ಯಗಳು ಬರಬೇಕು. ಕೇವಲ ಶಿಕ್ಷಣ ಕಲಿಕೆಯಿಂದ ಬುದ್ದಿ ಬಂದರೆ ಪ್ರಯೋಜನವಿಲ್ಲ, ಅವರಿಗೆ ಸಂಸ್ಕಾರ ಬರಬೇಕು ಎಂಬ ಸಲಹೆಗಳನ್ನು ನೀಡಿದರು.
ಕಾಖಂಡಕಿ ಗುರುದೇವಾಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಏನಿದ್ದರೇನು ಆತ್ಮಜ್ಞಾನ ಇಲ್ಲದಿದ್ದರೆ, ಹೆಣಕ್ಕೆ ಸಿಂಗರಿಸಿದಂತೆ. ಬದುಕು ಸಾರ್ಥಕವಾಗಬೇಕಾದರೆ ಎಲ್ಲರೂ ಮುಖ್ಯವಾಗಿ ನಾಲ್ಕು ಗ ಗಳಾದ ಗಾಯತ್ರಿ ಮಂತ್ರ, ಗಂಗಾಮಾತೆ, ಗೋಮಾತೆ, ಗೀತಾಮಾತೆ ಪೂಜಿಸುವಂತೆ ತಿಳಿಸಿದರು.ಸ್ವಾಮೀಜಿಗಳಿಗೆ ಗೋ ಪೂಜೆ
ಡೊಳ್ಳು ಕುಣಿತ, ಕಳಶ ಹೊತ್ತ ಮಹಿಳೆಯರು ಸ್ವಾಗತಿಸಿದ ಬಳಿಕ ಸೋಂದಾ ಶ್ರೀಗಳು ಗೋಪೂಜೆ ಮಾಡಿ, ವೇದಘೋಷಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಶ್ರೀ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ವೇಳೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಭಗವದ್ಗೀತಾ 9ನೇ ಅಧ್ಯಾಯದ ಧ್ಯಾನ ಶ್ಲೋಕ ಪಠಣ ಮಾಡಿ ದಾಖಲೆ ಸೃಷ್ಠಿಸಲಾಯಿತು.ಮೊಳಗಿದ ಧ್ಯೆಯೋದ್ಯೇಶ
ವಿಶ್ವಮಾತಾ ಭಗವದ್ಗೀತಾ. ನಾವೆಲ್ಲರೂ ಸೇರೋಣ, ಭಗವದ್ಗೀತಾ ಓದೋಣ. ಆಗಲೇಬೇಕು ತಕ್ಷಣ ಭಗವದ್ಗೀತೆಯ ಶಿಕ್ಷಣ. ಗೀತಾ ಗೀತಾ ಭಗವದ್ಗೀತಾ, ಮಾತಾ ಮಾತಾ ಭಾರತ ಮಾತಾ ಮುಂತಾದ ಘೋಷ್ಯವಾಕ್ಯಗಳು ಮೊಳಗಿದವು.ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಮಾತನಾಡಿದರು. ಅಭಿಯಾನದ ಜಿಲ್ಲಾಧ್ಯಕ್ಷ ಉಮೇಶ ಕಾರಜೋಳ, ಉಪಾಧ್ಯಕ್ಷ ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಮುಖಂಡರಾದ ಅರುಣ ಶಹಾಪುರ, ಅರುಣ ಸೊಲಾಪುರಕರ, ಪರಮೇಶ್ವರ ಹೆಗಡೆ, ಜಿ.ಎನ್.ಹೆಗಡೆ, ಬಸವರಾಜ ಕವಲಗಿ, ಸಂಗನಗೌಡ ಪಾಟೀಲ, ವಿನೋದ ಮಣೂರ, ಜಯಶ್ರೀ ಮುಂಡೆವಾಡಿ, ಶ್ರೀಹರಿ ಗೊಳಸಂಗಿ, ಸುರೇಶ ಶೇಡಶ್ಯಾಳ, ಭುವನೇಶ್ವರಿ ಕೋರವಾರ ಸೇರಿ ಸಾವಿರಾರು ವಿದ್ಯಾರ್ಥಿಗಳು, ಭಕ್ತರು ಭಾಗವಹಿಸಿದ್ದರು.------------
ಕೋಟ್ನ್ಯಾಯಾಲಯದಲ್ಲಿ ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿಸುತ್ತಾರೆ. ಕಾರಣ ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಶಾಲೆಯಲ್ಲಿ ಭಗವದ್ಗೀತೆ ಹೇಳುವುದರಿಂದ ಮಕ್ಕಳಿಗೆ ಅಲ್ಪಪ್ರಾಣ, ಮಹಾಪ್ರಾಣ ಶುದ್ಧಿಯಾಗುತ್ತವೆ. ಇಂತಹ ಭಗವದ್ಗೀತೆಯ ಜಾಗೃತಿ ಕಾರ್ಯವನ್ನು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತಲುಪಿಸಿದ ಕಾರ್ಯ ಶ್ಲಾಘನೀಯ.
- ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗ ಮಠ ಸಿಂದಗಿ