ಸಾರಾಂಶ
ಸಿದ್ದಲಿಂಗ ಕಿಣಗಿ
ಕನ್ನಡಪ್ರಭ ವಾರ್ತೆ ಸಿಂದಗಿಮದುವೆ ಸಮಾರಂಭಗಲ್ಲಿ ಆಮಂತ್ರಣ ಪತ್ರಿಕೆಗಳನ್ನು ನೀಡಿ ಮದುವೆಗೆ ಆಹ್ವಾನಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮದುವೆಗೆ ಆಮಂತ್ರಣ ಪತ್ರಿಕೆಗಳನ್ನು ನೀಡುವುದರೊಂದಿಗೆ ಭಗವದ್ಗೀತೆ ಪುಸ್ತಕಗಳನ್ನು ನೀಡಿ ಆಹ್ವಾನ ನೀಡುವ ಮೂಲಕ ಪುಸ್ತಕ ಸಂಸ್ಕೃತಿ ಮೆರೆದಿದ್ದಾರೆ. ಇದು ಸಾರ್ವಜನಿಕರ ಪ್ರಸಂಶೆ ಪಾತ್ರವಾಗಿದೆ. ಹೌದು, ಸಿಂದಗಿಯ ವಿವೇಕಾನಂದ ವೃತ್ತದಲ್ಲಿನ ಚಿಂಚೋಳಿ ದಂತ ಆಸ್ಪತ್ರೆಯ ವೈದ್ಯ ಸಿದ್ದರಾಮ ಗಂಗಣ್ಣ ಚಿಂಚೋಳಿ ಎಂಬುವರು ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ. ಸಿಂದಗಿ ತಾಲೂಕಿನ ಆಹೇರಿ ಗ್ರಾಮದ ಗಂಗಣ್ಣ ಚಿಂಚೋಳಿ ಮತ್ತು ಕಾಶೀಬಾಯಿ ಚಿಂಚೋಳಿ ಅವರ ಪುತ್ರ. ಪ್ರಾಥಮಿಕ ಶಾಲೆಯಿಂದಲು ಓದುವ ಹವ್ಯಾಸ ಪುಸ್ತಕವೆಂದರೆ ಪ್ರೀತಿ. ಪುಸ್ತಕದ ಜ್ಞಾನ ಬದುಕನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ.
ಬೆಂಗಳೂರಿನ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ವಿಕ್ಟೋರಿಯಾ ಆಸ್ಪತ್ರೆ) ವೈದ್ಯಕೀಯ ಪದವಿ ಮುಗಿಸಿದ್ದು, ಕೆಲ ವರ್ಷ ಅಲ್ಲಿಯೇ ವೃತ್ತಿ ಆರಂಭಿಸಿದ್ದರು. ಇದೀಗ ಸಿಂದಗಿಯಲ್ಲಿ ದಂತ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಡಾ.ಸಿದ್ದರಾಮ ಚಿಂಚೋಳಿ ಆಹೇರಿಯ ಅಮೃತಗೌಡ ಬಿರಾದಾರ ಮತ್ತು ಶಿವಲೀಲಾ ದಂಪತಿ ಪುತ್ರಿ ದಂತ ವೈದ್ಯೆ ಸವಿತಾ ಮದುವೆ ನಿಶ್ಚಯವಾಗಿದ್ದು, ಪಟ್ಟಣದ ಬ್ಯಾಕೋಡ ರಸ್ತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಫೆ.10ಕ್ಕೆ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ಇಸ್ಕಾನ್‌ನಿಂದ ಸುಮಾರು ₹ 5.50 ಲಕ್ಷ ವೆಚ್ಚದಲ್ಲಿ 2000 ಭಗವದ್ಗೀತೆ ಪುಸ್ತಕಗಳನ್ನು ಖರೀದಿಸಿ ಮಠಾಧೀಶರಿಗೆ, ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಪ್ರತಿಯೊಬ್ಬರಿಗೂ ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ಪುಸ್ತಕ ನೀಡಿದ್ದಾರೆ.ವೈದ್ಯ ಡಾ.ಸಿದ್ದರಾಮರ ಸಾಮಾಜಿಕ ಕಳಕಳಿ ಪ್ರಶಂಸೆಗೆ ಪಾತ್ರವಾಗಿದೆ. ಉಚಿತ ದಂತ ವೈದ್ಯಕೀಯ ಪರೀಕ್ಷಾ ಶಿಬಿರ ಆಯೋಜಿಸುವ ಮೂಲಕ ಸಾಮಾಜಿಕ ಸೇವೆ ಮೆರೆಯುತ್ತಿದ್ದಾರೆ.
ಕೋಟ್ಸ್-ಡಾ.ಚಿಂಚೋಳಿ ಅವರ ಕಾರ್ಯ ಸಂತಸ ತಂದಿದೆ. ಮದುವೆಯಲ್ಲಿ ಬಟ್ಟೆ ಮತ್ತು ಬೇರೆ ಬೇರೆ ಉಡುಗೊರೆ ಕೊಡುವುದು ಸಾಮಾನ್ಯ. ಆದರೆ ಡಾ.ಚಿಂಚೋಳಿ ಹಿಂದು ಧರ್ಮದ ಧರ್ಮಗ್ರಂಥ ಭಗವದ್ಗೀತೆಯನ್ನು ಉಡುಗರೆಯಾಗಿ ನೀಡಿರುವುದು ಶ್ಲಾಘನೀಯ. ಈ ಗ್ರಂಥ ಎಲ್ಲರ ಮನೆಯಲ್ಲಿ ಮತ್ತು ಮನದಲ್ಲಿ ಉಳಿಯಬೇಕು ಎಂಬ ಆಸೆಯಿಂದ ಈ ಕಾರ್ಯ ಮಾಡಿದ್ದು ಉತ್ತಮ. ವೈದ್ಯ ದಂಪತಿಗೆ ಭಗವಂತ ಆಶೀರ್ವಾದ ದಯಪಾಲಿಸಲಿ.
ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠಕೋಟ್ಸ್-
ಡಾ.ಸಿದ್ದರಾಮ ಚಿಂಚೋಳಿ ಮದುವೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಭಗವದ್ಗೀತೆ ಪುಸ್ತಕ ನೀಡುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಇದು ಉತ್ತಮ ಬೆಳವಣಿಗೆ. ಇಂದಿನ ಯುವ ಜನಾಂಗಕ್ಕೆ ಇದು ಮಾದರಿಯಾಗಿದೆ. ವೈದ್ಯ ದಂಪತಿಗಳಿಗೆ ಶುಭವಾಗಲಿ.ಅಶೋಕ ಮನಗೂಳಿ, ಶಾಸಕರುಕೋಟ್ಸ್-
ನನ್ನ ಮದುವೆ ಸರಳ ಮತ್ತು ಅರ್ಥ ಪೂರ್ಣವಾಗಬೇಕು ಎಂಬ ಕನಸು ಕಂಡಿದ್ದು, ಭಗವದ್ಗೀತೆ ಸಾಮಾನ್ಯ ಗ್ರಂಥವಲ್ಲ, ಇದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಗ್ರಂಥ. ಪ್ರತಿಯೊಬ್ಬರು ಓದಬೇಕು. ಅದರಲ್ಲಿನ ಜ್ಞಾನ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈ ಕಾರ್ಯ ಮಾಡಿದ್ದೇವೆ.ಡಾ.ಸಿದ್ದರಾಮ, ಡಾ.ಸವಿತಾ ಚಿಂಚೋಳಿ, ನವ ವಧುವರರು.