ಭಾಗವತರಾಗಿ ತಿರುಗಾಟದ 25ನೇ ವರ್ಷದ ಸಂಭ್ರಮದಲ್ಲಿರುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಕಟೀಲಿನಲ್ಲಿ ಸೋಮವಾರ ಹನುಮಗಿರಿ ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ಅಭಿಮಾನಿ ಬಳಗದಿಂದ ಸಂಮಾನಿಸಲಾಯಿತು.

ಮೂಲ್ಕಿ: ಯಕ್ಷಗಾನದ ಭಾಗವತರಾಗಿ ತಿರುಗಾಟದ 25ನೇ ವರ್ಷದ ಸಂಭ್ರಮದಲ್ಲಿರುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಕಟೀಲಿನಲ್ಲಿ ಸೋಮವಾರ ಹನುಮಗಿರಿ ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ಅಭಿಮಾನಿ ಬಳಗದಿಂದ ಸಂಮಾನಿಸಲಾಯಿತು.ಚಿನ್ನದ ಉಂಗುರ, ಶಾಲು, ಪಕಡಿ ಕಿರೀಟ, ಭಾಗವತ ಪೇಟ, ಸಮ್ಮಾನಪತ್ರವನ್ನು ನೀಡಿ ಗೌರವಿಸಲಾಯಿತು.ಅಭಿನಂದನ ಮಾತುಗಳನ್ನಾಡಿದ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕಟೀಲಿನಂತಹ ಕ್ಷೇತ್ರದಲ್ಲಿ ಸರಳ, ಸಜ್ಜನ ಭಾಗವತ ರವಿಚಂದ್ರರಿಗೆ ಪ್ರಸಾದ ರೂಪವಾಗಿ ಈ ಗೌರವ ಸಂದಿದೆ. ಕೀರ್ತಿ ಅಹಂಕಾರ ತರದೆ, ಇನ್ನಷ್ಟು ಸಾಧನೆ, ಬೆಳಗುವಿಕೆ ಯಕ್ಷಗಾನರಂಗದಲ್ಲಿ ಸಾಧ್ಯವಾಗಲಿ ಎಂದರು.ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಬೇರೆ ಭಾಗವತರ ಅನುಕರಣೆ ಇಲ್ಲದೆ, ಅನುಸರಣೆಯ ಜೊತೆ ಪ್ರಯತ್ನಶೀಲತೆಯಿಂದ ಮೇಳದಲ್ಲಿ ಒಂದನೆಯ ಮತ್ತು ಒಳ್ಳೆಯ ಭಾಗವತರಾಗಿ ಬೆಳೆದಿರುವ ರವಿಚಂದ್ರ ಕನ್ನಡಿಕಟ್ಟೆ ಇನ್ನಷ್ಟು ರಾರಾಜಿಸಲಿ ಎಂದರು.

ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ, ಪಶುಪತಿ ಶಾಸ್ತ್ರಿ, ಹರೀಶ್ ಬಳಂತಿಮುಗರು, ದೊಡ್ಡಯ್ಯ ಮೂಲ್ಯ, ಸುನೀಲ್ ಬಂಗೇರ ಎಕ್ಕಾರು, ದಿವಾಣ ದುರ್ಗಾಪ್ರಸಾದ್ ಭಟ್, ಪ್ರೇಮನಾಥ ಪೂಜಾರಿ, ರಮಾನಂದ ಕಟೀಲು, ದುರ್ಗಾಪ್ರಸಾದ್ ಕೊಂಡೇಲ, ದುರ್ಗಾಪ್ರಸಾದ್, ದಿನೇಶ್ ಕಟೀಲು ಮತ್ತಿತರರಿದ್ದರು.ರಂಜನ್ ಹೊಳ್ಳ ಸುರತ್ಕಲ್ ಸಮ್ಮಾನ ಪತ್ರ ವಾಚಿಸಿದರು. ರಾಜೇಂದ್ರಪ್ರಸಾದ್ ಎಕ್ಕಾರು ನಿರೂಪಿಸಿದರು.