ಗದಗ: ಜಲವೇ ಜೀವನ ಎಂಬ ತತ್ವಕ್ಕೆ ಸಾಕ್ಷಿಯಾಗಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಲೋಕಕಲ್ಯಾಣಕ್ಕಾಗಿ ಅಸಾಧ್ಯವಾದುದನ್ನು ಸಾಧಿಸಿದ ಮಹಾನ್ ಪುರುಷ ಮಹರ್ಷಿ ಭಗೀರಥ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನೀರಿಲ್ಲದೆ ಜೀವನವಿಲ್ಲ ಎಂಬ ಸತ್ಯವನ್ನು ಹೇಳಿದರು ಎಂದರು.

ಮಾನವ ಸಂಕುಲವು ನದಿಗಳ ತೀರದಲ್ಲಿಯೇ ನಾಗರಿಕತೆಗಳನ್ನು(ಹರಪ್ಪ, ಮೊಹೆಂಜೋದಾರೊ ಮತ್ತು ಸಿಂಧೂ ನಾಗರಿಕತೆ) ಬೆಳೆಸಿಕೊಂಡಿರುವುದು ಜಲದ ಪ್ರಾಮುಖ್ಯತೆ ಸಾರುತ್ತದೆ. ಅಂತಹ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಭಗೀರಥರ ಕಾರ್ಯ ಸ್ಮರಣೀಯ ಎಂದರು.ಮೂರು ಲೋಕಗಳಲ್ಲಿ ಗಂಗೆ ಭಗೀರಥರು ಕೇವಲ ಭೂಮಿಗೆ ಮಾತ್ರವಲ್ಲದೆ ಪಾತಾಳ, ಭೂಮಿ ಮತ್ತು ಆಕಾಶ ಎಂಬ ಮೂರು ಲೋಕಗಳಲ್ಲಿ ಗಂಗೆಯು ನೆಲೆಸುವಂತೆ ಮಾಡಿದರು. ಈ ಮೂಲಕ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿಕೊಟ್ಟರು. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂಬ ಪಾಠವನ್ನು ಭಗೀರಥರ ಜೀವನದಿಂದ ಕಲಿಯಬೇಕಿದೆ. ಅವರ ದಿಟ್ಟ ನಿರ್ಧಾರ ಮತ್ತು ಕಠಿಣ ಪ್ರಯತ್ನವು ಇಂದಿನ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ..ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಹಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜು ಸೊಪಡ್ಲ, ಬಿ.ಎಫ್. ಉಪ್ಪಾರ, ರಾಜು ಗಡ್ಡಿ, ಮಹರ್ಷಿ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಭೀಮನಗೌಡ ಪಾಟೀಲ, ಹನುಮಂತಪ್ಪ ಗರಗ, ಚನ್ನಬಸವ್ವ ಸಾವಕ್ಕನವರ ಸೇರಿದಂತೆ ಇತರರು ಇದ್ದರು. ಮಂಜುನಾಥ ಹುಯಿಲಗೋಳ ಸ್ವಾಗತಿಸಿ, ವಂದಿಸಿದರು.