ಉಪ್ಪಾರ ಸಮುದಾಯ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು, ಮಹರ್ಷಿ ಭಗೀರಥ ಅವರ ತತ್ವ- ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ .
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಹರ್ಷಿ ಭಗೀರಥ ಒಂದು ಜಾತಿ, ವರ್ಗಕ್ಕೆ ಸೀಮಿತವಾದ ವ್ಯಕ್ತಿಯಾಗದೆ ಭರತ ಭೂಮಿಗೆ ನೀರು ಹರಿಸಿದ ಬಹುದೊಡ್ಡ ಶಕ್ತಿಯಾಗಿದ್ದಾರೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣ ಬದರಿಕೊಪ್ಪಲಿನಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ತಾಲೂಕು ಮಟ್ಟದ ಮಹರ್ಷಿ ಭಗೀರಥ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಡತನದ ನಡುವೆಯೇ ಉಪ್ಪು ತಯಾರು ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಉಪ್ಪಾರ ಸಮುದಾಯವನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಸಮುದಾಯದ ಪ್ರತಿಯೊಬ್ಬರೂ ಕೂಡ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಜಿಲ್ಲಾ ಉಪ್ಪಾರ ಸಂಘದ ಮುಖಂಡ ದುದ್ದ ಚಂದ್ರಶೇಖರ್ ಮಾತನಾಡಿ, ಉಪ್ಪಾರ ಸಮುದಾಯ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು, ಮಹರ್ಷಿ ಭಗೀರಥ ಅವರ ತತ್ವ- ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದರು.ಸಮುದಾಯದ ಮುಖ್ಯಸ್ಥೆ ಮಂಜುಳ ಅವರು ಮಹರ್ಷಿ ಭಗೀರಥರ ಮಹತ್ವ ಕುರಿತು ಪ್ರಧಾನ ಭಾಷಣ ಮಾಡಿದರು. ಅಯ್ಯನ ಸರಗೂರಿನ ಮಲೆ ಮಹದೇಶ್ವರಸ್ವಾಮಿ ಎಣ್ಣೆಮಜ್ಜನ ಸೇವಾ ಸಮಿತಿಯ ರಂಗಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ಸಮುದಾಯದ 30ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಇದಕ್ಕೂ ಮುನ್ನ ಮಹರ್ಷಿ ಭಗೀರಥರ ಭಾವಚಿತ್ರವನ್ನು ಸರ್ವಾಲಂಕೃತ ತೆರೆದ ವಾಹನದಲ್ಲಿರಿಸಿ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಬದರಿಕೊಪ್ಪಲು ವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಮಾಜಿ ಸದಸ್ಯೆ ರೂಪಾ ಮಂಜುನಾಥ್, ಮುಖ್ಯಾಧಿಕಾರಿ ವೀಣಾ, ನಿವೃತ್ತ ಶಿಕ್ಷಕ ಜಯರಾಜು, ಅರಣ್ಯ ಇಲಾಖೆಯ ಪಾಲಹಳ್ಳಿ ಸೋಮಣ್ಣ, ಶಿವಲಿಂಗಯ್ಯ, ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಲ್ಲನಕಟ್ಟೆ ಕುಮಾರ್, ಉದ್ಯಮಿ ಆನಂದ್, ನಗುವಿನಹಳ್ಳಿ ಮಂಜು, ಚಾಮನಕೊಪ್ಪಲು ಉಮೇಶ್, ಹಿರಿಯಣ್ಣ, ಗ್ರಾಮದ ಮುಖ್ಯಸ್ಥರಾದ ಮಂಜುನಾಥ್, ಬಿ.ಆರ್.ಕುಮಾರ್, ತಿಮ್ಮಪ್ಪ, ಶ್ರೀನಿವಾಸ್, ಚಂದ್ರು, ಸತೀಶ್, ರಘು, ಸ್ವಾಮಿ, ಅಶೋಕ್, ಕಾವ್ಯಮುರಳಿ, ಶಿಕ್ಷಕ ಕೃಷ್ಣಮೂರ್ತಿ, ಸುರೇಶ್ ಉಪ್ಪಾರ್ ಸೇರಿದಂತೆ ನೂರಾರು ಮಂದಿ ಇದ್ದರು.