ಸಾರಾಂಶ
-ಯಾದಗಿರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಗಂಗೆಯು ಭೂಮಿಗೆ ಬರಲು ಭಗೀರಥ ಕಾರಣನಾದ. ಅದಕ್ಕಾಗಿಯೇ ಗಂಗೋತ್ರಿಯ ಮೂಲಕ ಹರಿಯುವ ಗಂಗಾ ನದಿಯ ಭಾಗವನ್ನು ಭಾಗೀರಥಿ ಎಂದು ಕರೆಯಲಾಗುತ್ತದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ನಗರಸಭೆ, ಭಗೀರಥ ಜಯಂತ್ಯುತ್ಸವದ ಸಂಯುಕ್ತಾಶ್ರಯದಲ್ಲಿ ಭಾನುವಾರ ಜಿಲ್ಲಾ ಪಂತ್ಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಠಿಣ ತಪಸ್ಸು ಮಾಡುವ ಮೂಲಕ ಶಿವನನ್ನು ಒಲಿಸಿಕೊಂಡು, ಆ ಮೂಲಕ ಗಂಗೆಯನ್ನು ಧರೆಗೆ ಇಳಿಸಿ ಭೂಲೋಕದ ಜನಕ್ಕೆ ನೀರು ನೀಡಿದ ಭಗೀರಥ. ನಾವು ಇಂದಿಗೂ ಯಾವುದೇ ಕಠಿಣ ಕೆಲಸ ಮಾಡುವಾಗ ಇದಕ್ಕೆ ಭಗೀರಥ ಪ್ರಯತ್ನ ಮಾಡಬೇಕಾಗುತ್ತದೆ ಎಂಬ ಮಾತು ಆಡುತ್ತೇವೆ. ಆ ಮಾತೇ ಮಹರ್ಷಿ ಭಗೀರಥರು ಎಂದರು. ಸಮುದ್ರ ದಂಡೆ ಮೇಲೆ ಬರುವ ಮಣ್ಣು, ನೀರಿನಲ್ಲಿ ಉಪ್ಪು ಶೋಧಿಸಿ, ಅದನ್ನೇ ಜನರಿಗೆ ಮಾರುವ ಮೂಲಕ ತಮ್ಮ ಕುಲಕಸಬು ಮಾಡಿಕೊಂಡು ಬದುಕು ಕಟ್ಟಿಕೊಂಡ ಪ್ರಾಮಾಣಿಕ ಸಮುದಾಯವೇ ಈ ಉಪ್ಪಾರ ಸಮಾಜ ಎಂದು ಶಾಸಕರು ವರ್ಣಿಸಿದರು.ಬಡತನವಿದ್ದರೂ ಪ್ರಾಮಾಣಿಕ ಮತ್ತು ಸತ್ಯದ ದಾರಿಯಲ್ಲಿ ನಡೆಯುವ ನಂಬಿಗಸ್ಥ ಸಮಾಜ ಇದಾಗಿದೆ ಎಂದರು. ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ
ಕೊಡಿಸಿ, ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ ಎಂದರು. ಸುಭಾಶ್ಚಂದ್ರ ಕೊಟಗೇರಾ ವಿಶೇಷ ಉಪನ್ಯಾಸ ನೀಡಿ, ತಮ್ಮ ತಾತಂದಿರ ಮೋಕ್ಷಕ್ಕಾಗಿ ಹಾಗೂ ಸಕಲ ಜೀವಿಗಳಿಗಾಗಿ ಗಂಗೆಯನ್ನು ಧರೆಗೆ ತಂದೆ ಭಗೀರಥನು ನಮ್ಮ ಸಮಾಜಕ್ಕೆ ಸೇರಿದ್ದು ಹೆಮ್ಮೆಯ ವಿಷಯ ಎಂದರು.ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೋಳ್ ಮಾತನಾಡಿ, ಅವರು ಕಠಿಣ ಪರಿಶ್ರಮದಿಂದ ಸಕಲ ಜೀವಿಗಳಿಗೂ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಭಗೀರಥರಂತೆ ಎಲ್ಲರೂ ಅನ್ಯರ, ಪರರ ಸೇವೆ ಮಾಡಬೇಕು. ಸಕಲ ಸಮಾಜದವರು ಒಗ್ಗೂಡಿ ಒಬ್ಬರಿಗೊಬ್ಬರು ನೆರವಾಗಬೇಕು. ಇಂತಹ ಮಹನೀಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಈ ಸಂದೇಶ ರವಾನಿಸಬೇಕೆಂಬ ಉದ್ಧೇಶದಿಂದ ಸರ್ಕಾರ 33 ಮಹನೀಯರ ಜಯಂತಿ ಆಚರಣೆಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಕಟ್ಟಿಮನಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಭಾಗವಹಿಸಿದ್ದರು. ರೈಲ್ವೆ ನಿಲ್ದಾಣದ ರಸ್ತೆಯಿಂದ ಡಿಗ್ರಿ ಕಾಲೇಜಿನವರೆಗೂ ಭಗೀರಥ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಸಮಾಜದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಿ.ಎನ್.ಹಣಮಂತಪ್ಪ ಹಾಗೂ ಚಂದ್ರಶೇಖರ ಗೋಗಿ ಸಂಗಡಿಗರಿಂದ ಪ್ರಾರ್ಥನೆ ಮತ್ತು ಸ್ವಾಗತಗೀತೆ ನಡೆಯಿತು. ಶಿಕ್ಷಕ ವೆಂಕಟೇಶ ದೇಸಾಯಿ ನಿರೂಪಿಸಿದರು. ಶ್ರೀನಿವಾಸ ಕಡೆಚೂರ್ ವಂದಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪ್ಪಾರ ಸಮಾಜದ ಸಂಶೋಧಕಿ ಹನುಮಾಕ್ಷಿ ಗೋಗಿ, ಪ್ರವೀಣಕುಮಾರ ಗೋಗಿ, ನಾರಾಯಣ, ಗಿರಿಯಪ್ಪ ಪೂಜಾರಿ, ಪೂರ್ಣಿಮಾ ಗಡ್ಡಿಮನಿ, ರಾಮಣ್ಣ ಸಾಹುಕಾರ ಖಾನಾಪುರ, ಲಿಂಗಣ್ಣ ಕಟ್ಟಿಮನಿ ಅವರುಗಳಿಗೆ ಸನ್ಮಾನಿಸಲಾಯಿತು.----
4ವೈಡಿಆರ್4 : ಯಾದಗಿರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪ್ಪಾರ ಸಮಾಜದ ಸಂಶೋಧಕಿ ಹನುಮಾಕ್ಷಿ ಗೋಗಿ, ಪ್ರವೀಣಕುಮಾರ ಗೋಗಿ, ನಾರಾಯಣ, ಗಿರಿಯಪ್ಪ ಪೂಜಾರಿ, ಪೂರ್ಣಿಮಾ ಗಡ್ಡಿಮನಿ, ರಾಮಣ್ಣ ಸಾಹುಕಾರ ಖಾನಾಪುರ, ಲಿಂಗಣ್ಣ ಕಟ್ಟಿಮನಿ ಅವರುಗಳಿಗೆ ಸನ್ಮಾನಿಸಲಾಯಿತು.