ಭಾಗ್ಯನಗರ ಸಮಗ್ರ ಅಭಿವೃದ್ಧಿಗೆ ಬದ್ಧ: ರಾಘವೇಂದ್ರ ಹಿಟ್ನಾಳ

| Published : Jan 11 2025, 12:47 AM IST

ಸಾರಾಂಶ

ಕೊಪ್ಪಳ ಸಮೀಪದ ಭಾಗ್ಯನಗರದ ಪಟ್ಟಣದಲ್ಲಿ ಶುಕ್ರವಾರ ₹3.38 ಕೋಟಿ ವೆಚ್ಚದಲ್ಲಿ ನಗರೋತ್ಥಾನ ೪ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.

ಕೊಪ್ಪಳ: ಭಾಗ್ಯನಗರ ಪಟ್ಟಣ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಸಮೀಪದ ಭಾಗ್ಯನಗರದ ಪಟ್ಟಣದಲ್ಲಿ ಶುಕ್ರವಾರ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ₹3.38 ಕೋಟಿ ವೆಚ್ಚದಲ್ಲಿ ನಗರೋತ್ಥಾನ ೪ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಭಾಗ್ಯನಗರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಜತೆಗೆ ರಾಜ್ಯದಲ್ಲೇ ಮಾದರಿ ಪಟ್ಟಣವನ್ನಾಗಿ ಮಾಡಲು ಶ್ರಮಿಸುತ್ತೇನೆ. ಅನೇಕ ಹೋರಾಟದ ಮೂಲಕ ಭಾಗ್ಯನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಮೇಲ್ಸೇತುವೆ ಮತ್ತು ಪಪಂಗಾಗಿ ಮಾತ್ರವಲ್ಲ, ರಸ್ತೆ ಅಭಿವೃದ್ಧಿ, ಪದವಿ ಕಾಲೇಜು ಸೇರಿ‌ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹೋರಾಟ ಮಾಡಿದ್ದಾರೆ. ನಗರೋತ್ಥಾನ ೪ನೇ ಹಂತ ದೊರಕಿದೆ. ₹190 ಕೋಟಿಯ 450 ಹಾಸಿಗೆಯ ಆಸ್ಪತ್ರೆಯನ್ನು ಮುಂದಿನ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡುತ್ತಾರೆ. ₹೧೪೫ ಕೋಟಿ ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರಿನಿಂದ ೨೪*೭ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇ-ಲೈಬ್ರರಿ, ಪದವಿ ಕಾಲೇಜು, ಇಂಟರ್‌ನ್ಯಾಷನಲ್ ಮಾದರಿಯ ಶಾಲೆ ಮಂಜೂರು ಮಾಡುತ್ತೇವೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಭಾಗ್ಯನಗರ ಮೇಲ್ಸೇತುವೆ ಅಭಿವೃದ್ಧಿ ಸ್ಮರಿಸಿದರು. ಭಾಗ್ಯನಗರಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಪಪಂ ಉಪಾಧ್ಯಕ್ಷ ಹೊನ್ನುರಸಾಬ್ ಬಯ್ಯಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಗೂಳಪ್ಪ ಹಲಗೇರಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮುಖಂಡ ಯಮನಪ್ಪ ಕಬ್ಬೇರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಪಪಂ ಸದಸ್ಯರು ಇದ್ದರು.ಭಾಗ್ಯನಗರದ ಮೂಲಕ ರಿಂಗ್ ರೋಡ್: ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುವ ಪಟ್ಟಣ ಭಾಗ್ಯನಗರವಾಗಿದೆ.‌ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಅಮೃತ-೨ ಯೋಜನೆಯಡಿ 24×7 ಕುಡಿಯುವ ನೀರು ಒದಗಿಸುತ್ತಿದ್ದೇವೆ. ಮೆಡಿಕಲ್ ಕಾಲೇಜಿನಿಂದ ಭಾಗ್ಯನಗರ ಮಾರ್ಗವಾಗಿ ರಿಂಗ್ ರೋಡ್ ಅವಶ್ಯವಾಗಿದ್ದು, ಈ ನಿಟ್ಟಿ‌ನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.