ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

| Published : Sep 03 2024, 01:34 AM IST

ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುದೊಡ್ಡ ಸಮಸ್ಯೆಯಾಗಿರುವ ಕಟ್ಟಡ ಪರವಾನಿಗೆ ಇತ್ಯರ್ಥ ಯಾವಾಗ ಎನ್ನುವುದು ನಾಗರಿಕ ಪ್ರಶ್ನೆಯಾಗಿದೆ.

ಕಟ್ಟಡ ಪರವಾನಿಗೆ ಸಮಸ್ಯೆ ಇತ್ಯರ್ಥ ಯಾವಾಗ?

ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. 50ರಷ್ಟು ಮನೆಗಳಿಗೆ ಇಲ್ಲ ಪರವಾನಗಿಕನ್ನಡಪ್ರಭ ವಾರ್ತೆ ಕೊಪ್ಪಳ

ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯರು ಆಯ್ಕೆಯಾದರೂ ಸಹ ಅಧಿಕಾರ ಇರಲಿಲ್ಲ. 2 ವರ್ಷ 8 ತಿಂಗಳ ಬಳಿಕ ನೂತನ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದು, ಅಧ್ಯಕ್ಷರಾಗಿ ತುಕಾರಮಪ್ಪ ಗಡಾದ ಹಾಗೂ ಉಪಾಧ್ಯಕ್ಷರಾಗಿ ಹೊನ್ನೂರಸಾಬ ಆಯ್ಕೆಯಾಗಿದ್ದಾರೆ, ಆದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುದೊಡ್ಡ ಸಮಸ್ಯೆಯಾಗಿರುವ ಕಟ್ಟಡ ಪರವಾನಿಗೆ ಇತ್ಯರ್ಥ ಯಾವಾಗ ಎನ್ನುವುದು ನಾಗರಿಕ ಪ್ರಶ್ನೆಯಾಗಿದೆ.

ಭಾಗ್ಯನಗರ ಪಪಂ ವ್ಯಾಪ್ತಿಯ ಶೇ. 50ರಷ್ಟು ಮನೆಗಳಿಗೆ ಇದುವರೆಗೂ ಕಟ್ಟಡ ಪರವಾನಿಗೆ ಇಲ್ಲ, ಇದನ್ನು ಇತ್ಯರ್ಥ ಮಾಡುವ ಪ್ರಯತ್ನ ಇನ್ನು ಆಗಿಲ್ಲ.

ಏನಿದು ಸಮಸ್ಯೆ:ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2017ರ ಡಿಸೆಂಬರ್ ತಿಂಗಳಲ್ಲಿ ಸರ್ಕಾರದಿಂದ ಹೊರಡಿಸಲಾದ ಆದೇಶದಿಂದಾಗಿ ಫಾರ್ಮ್ ನಂ. 3 ವಿತರಣೆ ಸ್ಥಗಿತ ಮಾಡಲಾಯಿತು. ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಯಿತು.

ಕಳೆದ ವರ್ಷದಿಂದ ಫಾರ್ಮ ನಂ. 3 ಸಮಸ್ಯೆ ಇತ್ಯರ್ಥವಾಗಿದ್ದು, ಈಗ ಕಟ್ಟಡ ಪರವಾನಿಗೆ ಸಮಸ್ಯೆ ಇತ್ಯರ್ಥವಾಗಿಲ್ಲ.

ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದ ಲೇಔಟ್ ಗಳಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಈಗಾಗಲೇ ನೀಡಿದ್ದ ಕಟ್ಟಡ ಪರವಾನಿಗೆಯನ್ನು ರದ್ದು ಮಾಡಲಾಗಿದೆ ಹಾಗೂ ನೂತನವಾಗಿ ನೀಡುತ್ತಿಲ್ಲ. ಇದು ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ.

ಈಗಲೂ ಕಟ್ಟಡ ಪರವಾನಿಗೆ ಇಲ್ಲದವರು ಡಬಲ್ ಟ್ಯಾಕ್ಸ್ ತುಂಬಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗೆ ನೋಡಿದರೇ ಭಾಗ್ಯನಗರ ಪಟ್ಟಣ ಪಂಚಾಯಿತಿ ಆಗುವ ಮುನ್ನ ಇದು ಗ್ರಾಮ ಪಂಚಾಯಿತಿ ಇತ್ತು. ಆಗ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಬೇಕಾಗಿರಲಿಲ್ಲ. ಹೀಗಾಗಿ, ಅದರ ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ 8 ವರ್ಷದಿಂದ ಸಮಸ್ಯೆ ಹಾಗೆ ಇದೆ. ಹೀಗಾಗಿ, ಇದನ್ನು ನೂತನ ಆಡಳಿತ ಮಂಡಳಿ ಯಾವಾಗ ಇತ್ಯರ್ಥ ಮಾಡುತ್ತದೆ ಎನ್ನುವ ಪ್ರಶ್ನೆ ಎದುರಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಮುಂದೆ ಸವಾಲು:

ಈ ಸಮಸ್ಯೆಯನ್ನು ಇತ್ಯರ್ಥ ಮಾಡುವುದೇ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಎದುರಿಗಿರುವ ದೊಡ್ಡ ಸವಾಲಾಗಿದೆ. ಸರ್ಕಾರದ ಹಂತದಲ್ಲಿಯೇ ಆಗಬೇಕಾಗಿದ್ದರೂ ಸರ್ಕಾರದ ಮೇಲೆ ಒತ್ತಡ ಹಾಕಿಯಾದರೂ ಜಾರಿ ಮಾಡಬೇಕಾಗಿದೆ. ಈಗ ಆಯ್ಕೆಯಾಗಿರುವ ಸದಸ್ಯರೆಲ್ಲರೂ ಇದೇ ಭರವಸೆ ನೀಡಿ, ಆಯ್ಕೆಯಾಗಿದ್ದಾರೆ. ಹೀಗಾಗಿ, ಕೂಡಲೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿ ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.ಸನ್ಮಾನ:

ಜಿಲ್ಲಾ ಕೂದಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾಗ್ಯನಗರ ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಪಪಂ ನೂತನ ಅಧ್ಯಕ್ಷ ತುಕರಾಮಪ್ಪ ಗಡಾದ ಹಾಗೂ ಉಪಾಧ್ಯಕ್ಷ ಹೊನ್ನೂರಸಾಬ ಅವರನ್ನು ಸನ್ಮಾನ ಮಾಡಲಾಯಿತು. ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಗುಪ್ತ ಹಾಗೂ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ವಿರೂಪಾಕ್ಷಪ್ಪ ಹುರಕಡ್ಲಿ ಇದ್ದರು.