ಸಾರಾಂಶ
ಇಂಗ್ಲಿಷ್ ಮಾಧ್ಯಮ ಶಿಕ್ಷಣ ಎನ್ನುವುದು ನಗರ ಪ್ರದೇಶ ವಿದ್ಯಾರ್ಥಿಗಳ ಸೊತ್ತು ಎನ್ನುವುದನ್ನು ಸುಳ್ಳಾಗಿಸಿದ್ದಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಧಿಸಿ ತೊರಿಸಿದ್ದಾರೆ.
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಇಂಗ್ಲಿಷ್ ಮಾಧ್ಯಮ ಶಿಕ್ಷಣ ಎನ್ನುವುದು ನಗರ ಪ್ರದೇಶ ವಿದ್ಯಾರ್ಥಿಗಳ ಸೊತ್ತು ಎನ್ನುವುದನ್ನು ಸುಳ್ಳಾಗಿಸಿದ್ದಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಧಿಸಿ ತೊರಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಯೊಂದು ನಗರ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದಿರುವುದಕ್ಕೆ ಕೈಗನ್ನಡಿಯಂತೆ ಆಂಗ್ಲ ಮಾಧ್ಯಮದಲ್ಲಿ 100ಕ್ಕೆ 100 ಫಲಿತಾಂಶ ಬರುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಆಂಗ್ಲ ಮಾಧ್ಯಮದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದ್ದರೇ, ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100ರ ಗಡಿಯಲ್ಲಿ ಇದೆ. ಪಿಯುಸಿ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಸಂಸ್ಥೆ ಪ್ರಸಕ್ತ ವರ್ಷದ 10ನೇ ತರಗತಿಯಲ್ಲಿ ಶೇ.72 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಭಾಗ್ಯವಂತಿ ಕನ್ನಡ ಮಾಧ್ಯಮ ಪ್ರೌಢಶಾಲೆಯು 2024- 25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಪ್ರತಿಶತ 72ರಷ್ಟು ಫಲಿತಾಂಶ ಪಡೆದಿದೆ. ಸೃಷ್ಟಿ ಪಂಡಿತ ಬಿರಾದಾರ (595/625) ಶೇ.96 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾಳೆ. ರೇವಗೊಂಡ ಈರಣ್ಣ ಬಿರಾದಾರ ಈತನು 625ಕ್ಕೆ 549 ಅಂಕಗಳನ್ನು ಪಡೆದು ಶೇ.88 ಅಂಕ ಪಡೆದು ದ್ವಿತೀಯ, ಸಾಗರ ಅಣ್ಣರಾಯ ಕರ್ಜಿಗಿ ಈತನು 625ಕ್ಕೆ 547 ಅಂಕಗಳನ್ನು ಪಡೆದು ಶೇ.87.52 ಅಂಕಗಳನ್ನು ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ಶ್ರೀ ಭಾಗ್ಯವಂತಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಅನಿಲ್ ವಿಠೋಬ ದಶವಂತ (598/625) ಪ್ರಥಮ ಸ್ಥಾನ (ಶೇ.96), ಆರ್ಯನ ರಾಠೋಡ (568/625) ದ್ವಿತೀಯ, ಐಶ್ವರ್ಯ ಸಿದ್ದರಾಯ ಪಾಟೀಲ್ ತೃತೀಯ ಸ್ಥಾನ (546/625) ಪಡೆದುಕೊಂಡಿದ್ದಾರೆ.ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಇದಕ್ಕೆ ಕಾರಣ. ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟುವುದೇ ಅಪರೂಪ. ಅಂತಹದ್ದರಲ್ಲಿ ಚವಡಿಹಾಳ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜತೆಗೆ ನಾಡು ಮತ್ತು ದೇಶಕ್ಕಾಗಿ ಅನೇಕ ಪ್ರತಿಭೆಗಳನ್ನು ನೀಡುತ್ತಿದೆ. ಇದು ಆಡಳಿತ ಮಂಡಳಿಯ ಸಹಕಾರ ಮತ್ತು ಶಿಕ್ಷಕರ ಗುಣಮಟ್ಟ ಮತ್ತು ಮೌಲ್ಯಯುತ ಶಿಕ್ಷಣ ನೀಡಿದ್ದಕ್ಕೆ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ.ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶ ನೀಡುವ ಸಂಸ್ಥೆ:ಶಾಂತಪ್ಪ ದಶವಂತ ನೇತೃತ್ವದಲ್ಲಿ 1989-90ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಮತ್ತು ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಮತ್ತು ಜೀವನಕ್ಕಾಗಿ ಶಿಕ್ಷಣ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತ ಬಂದಿದೆ. ಆಡಳಿತ ಮಂಡಳಿ ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲದೆ ಸಂಗ್ರಹವಾದ ಹಣವನ್ನು ಸಂಸ್ಥೆಯ ಬೆಳವಣಿಗೆಗೆ ವಿನಿಯೋಗಿಸುತ್ತ ಬಂದಿದೆ. ಪ್ರಸ್ತುತ ಸಮಾಜದ ಶಿಕ್ಷಣ ವ್ಯಾಪರೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿರುದ್ಧವಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಎನ್ನುವ ಭಾವನೆಯೊಂದಿಗೆ ಶಿಕ್ಷಣ ಕೈಂಕರ್ಯವನ್ನು ನಡೆಸುತ್ತಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೆ ಅತ್ಯುತ್ಕೃಷ್ಟ ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಿದೆ. ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಈ ಸಂಸ್ಥೆ ಪ್ರಸಿದ್ಧಿ ಪಡೆದಿದೆ.ಶೈಕ್ಷಣಿಕ ಸಾಧನೆಗೆ ಹಾಸ್ಟೇಲ್ ಸೌಲಭ್ಯ ಪೂರಕ: 8ನೇ ತರಗತಿಯಿಂದ ದ್ವಿತೀಯ ಪಿಯುಸಿ ಯವರೆಗಿನ ಹುಡುಗರಿಗೆ ಹಾಗೂ ಹುಡುಗಿಯರಿಗೆ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಹುಡುಗಿಯರಿಗೆ ನೂತನ ಹಾಸ್ಟೆಲ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಸುಸಜ್ಜಿತ ತರಗತಿ ಕೊಠಡಿಗಳು, ವಿಶಾಲ ಗ್ರಂಥಾಲಯ, ಆಧುನಿಕ ಸೌಲಭ್ಯಗಳನ್ನೊಳಗೊಂಡ ಲ್ಯಾಬ್ಗಳು, ಬೃಹತ್ ಸಭಾಂಗಣ ಒಳಗೊಂಡಿರುವುದು ಶೈಕ್ಷಣಿಕ ಸಾಧನೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿರುವುದೇ ಈ ಫಲಿತಾಂಶಕ್ಕೆ ಕಾರಣ ಎನ್ನುತ್ತಾರೆ ವಿದ್ಯಾರ್ಥಿಗಳು.ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ (ಫ್ರೀ ಕೆಜಿ, ಎಲ್ಕೆಜಿ, ಯುಕೆಜಿ), ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ತನಕದ ಶಿಕ್ಷಣ ಏಕ ಸೂರಿನಡಿ ಲಭ್ಯವಿದ್ದು, ಸುಮಾರು 1500 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗಿದೆ. ಇದನ್ನು ಅರಿತ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯವರು ಗಡಿಭಾಗದ ಚವಡಿಹಾಳ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಶಿಕ್ಷಣ ಪ್ರಸಾರ ಮಾಡುತ್ತಿದ್ದಾರೆ.ಅಭಿನಂದಿಸಿದ ಆಡಳಿತ ಮಂಡಳಿಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಕಾಮಣ್ಣ ದಶವಂತ, ಸಲಹಾ ಸಮಿತಿಯ ಅಧ್ಯಕ್ಷ ಅಪ್ಪಾರಾಯ ದಶವಂತ, ಕಾರ್ಯದರ್ಶಿ ಶಿವಾನಂದ ದಶವಂತ, ಆಂಗ್ಲ ಮಾಧ್ಯಮ ವಿಭಾಗದ ಅಧ್ಯಕ್ಷ ನಾಗರಾಜ ದಶವಂತ, ಕನ್ನಡ ಮಾಧ್ಯಮ ವಿಭಾಗದ ಅಧ್ಯಕ್ಷ ಅಶೋಕ ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಎಸ್.ಐ ಕಾರಬಾರಿ, ಟಿ.ಆರ್ ನಾಯಕ, ಎಸ್.ಎಂ.ಗುಳೇದಗುಡ , ಆರ್.ಎಸ್.ಕೋಳಿ, ಬಸವರಾಜ ಚಂದ್ರಪ್ಪ, ಸುಭಾಷ ಲಮಾಣಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯ ಬಸವರಾಜ ರೋಡಗಿ, ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ ಹಲಸಂಗಿ, ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಈ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಮಹಾದಾಸೆಯಿಂದ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಪ್ರತಿ ವರ್ಷ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಫಲಿತಾಂಶ ಗುಣಮಟ್ಟದಿಂದ ಬರುತ್ತಿದ್ದು ಸಂತಸ ತಂದಿದೆ. ಪಪೂ ವಿಭಾಗದ ಫಲಿತಾಂಶವೂ ಉತ್ತಮವಾಗಿ ಬರುತ್ತಿದೆ. ಗ್ರಾಮೀಣ ಮಕ್ಕಳಿಗೆ ಈ ಸಂಸ್ಥೆಯಿಂದ ಅನುಕೂಲವಾಗುತ್ತಿದೆ. -ಶಾಂತಪ್ಪ ದಶವಂತ, ಅಧ್ಯಕ್ಷರು, ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಚವಡಿಹಾಳ.ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುತ್ತಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಇನ್ನೂ ಹೆಚ್ಚಿನ ಕಲಿಕಾ ಕೇಂದ್ರಗಳನ್ನು ಅರಂಭಿಸಲಿದೆ. ಪಾಲಕರ ಸಹಕಾರ,ಶಿಕ್ಷಕರ ಶ್ರಮ,ಆಡಳಿತ ಮಂಡಳಿಯ ಪ್ರಯತ್ನದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ.-ಅಪ್ಪಾರಾಯ ದಶವಂತ,
ಸಲಹಾ ಸಮಿತಿ ಅಧ್ಯಕ್ಷರು.