ಭೈರನಪಾದ ಏತ ಯೋಜನೆ ಜಾರಿಗೆ ಬದ್ಧ: ಡಾ.ಪ್ರಭಾ

| Published : Apr 22 2024, 02:01 AM IST

ಸಾರಾಂಶ

ನನೆಗುದಿಗೆ ಬಿದ್ದಿರುವ ಭೈರನಪಾದ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವುದೂ ಸೇರಿದಂತೆ ಹರಿಹರ, ದಾವಣಗೆರೆ, ಹರಪನಹಳ್ಳಿ ಕೊನೆಯ ಭಾಗಕ್ಕೆ ಸಮರ್ಪಕ ನೀರೊದಗಿಸಲು, ಹರಿಹರ ತಾಲೂಕಿಗೆ ಸಂಪೂರ್ಣ ನೀರಾವರಿ ಕಲ್ಪಿಸಲು ತಾವು ಬದ್ಧ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅಭಯ ನೀಡಿದ್ದಾರೆ.

- ಹರಿಹರ, ದಾವಣಗೆರೆ, ಹರಪನಹಳ್ಳಿ ಕೊನೆ ಭಾಗಕ್ಕೆ ನೀರು ಕೊಡಲು ಆದ್ಯತೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನನೆಗುದಿಗೆ ಬಿದ್ದಿರುವ ಭೈರನಪಾದ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವುದೂ ಸೇರಿದಂತೆ ಹರಿಹರ, ದಾವಣಗೆರೆ, ಹರಪನಹಳ್ಳಿ ಕೊನೆಯ ಭಾಗಕ್ಕೆ ಸಮರ್ಪಕ ನೀರೊದಗಿಸಲು, ಹರಿಹರ ತಾಲೂಕಿಗೆ ಸಂಪೂರ್ಣ ನೀರಾವರಿ ಕಲ್ಪಿಸಲು ತಾವು ಬದ್ಧ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅಭಯ ನೀಡಿದರು.

ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಿಂದ ಭಾನುವಾರ ಪ್ರಚಾರ ಕೈಗೊಂಡ ಅವರು ಸಾಲಕಟ್ಟೆ, ದೇವರ ಬೆಳಕೆರೆ, ಕಡ್ಲೇಗೊಂದಿ, ಸಲಗನಹಳ್ಳಿ, ಕೆ.ಬೇವಿನಹಳ್ಳಿ, ಬನ್ನಿಕೋಡು, ಷಂಷೀಪುರ, ಬೆಳ್ಳೂಡಿ, ಬ್ಯಾಲದಹಳ್ಳಿ, ಎಕ್ಕೆಗೊಂದಿ, ಭಾನುವಳ್ಳಿ, ರಾಯಪುರ, ರಾಮತೀರ್ಥ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ, ಯಲವಟ್ಟಿ, ಸಿರಿಗೆರೆ, ಕಡರನಾಯಕನಹಳ್ಳಿ, ನಂದೀಶ್ವರ ಕ್ಯಾಂಪ್‌, ನಂದಿಗುಡಿ, ಉಕ್ಕಡಗಾತ್ರಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಹರಿಹರ ತಾಲೂಕಿನ ಸಮಗ್ರ ನೀರಾವರಿ ಕಲ್ಪಿಸಲು ಒತ್ತು ನೀಡುವೆ ಎಂದರು.

ಹರಿಹರ ತಾಲೂಕಿನ ಕಕ್ಕರಗೊಳ್ಳ ಗ್ರಾಮದವರಾಗಿದ್ದು, ಕೊನೆಯ ಭಾಗದ ರೈತರ ಸಮಸ್ಯೆ ಬಗ್ಗೆ ಸಂಪೂರ್ಣ ಅರಿವಿದೆ. ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರೊದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ರಸಗೊಬ್ಬರ ಕಾರ್ಖಾನೆ ಮತ್ತು ಎಥೆನಾಲ್ ಘಟಕ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಹರಿಹರ ಹಾಗೂ ಸುತ್ತಮುತ್ತಲ ಗ್ರಾಮಗಳ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಶ್ರಮಿಸುವೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪಂಚನ್ಯಾಯ, 25 ಗ್ಯಾರಂಟಿ ಭರವಸೆಗಳು ಜನರಿಗೆ ಮುಂದೆ ಆಸರೆಯಾಗಲಿವೆ. ದಾವಣಗೆರೆ ಜಿಲ್ಲೆ, ಲೋಕಸಭಾ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸಿದೆ. ನೀವೆಲ್ಲರೂ ಲೋಕಸಭೆ ಚುನಾವಣೆಯಲ್ಲಿ ತಮಗೆ ಮತ ನೀಡುವ ಮೂಲಕ ಸಂಸದೆಯಾಗಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಹೆಚ್ಚು ಕೆಲಸ ಮಾಡಲು ನನಗೆ ಶಕ್ತಿ ನೀಡಬೇಕು ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಐದೂ ಗ್ಯಾರಂಟಿಗಳನ್ನು ನುಡಿದಂತೆ ಅನುಷ್ಠಾನಗೊಳಿಸಿದೆ. ಕೇಂದ್ರದಲ್ಲೂ ನಮ್ಮ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಬಡವರ ಪರ, ದೀನ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಯುವ ಜನರು, ನಿರುದ್ಯೋಗಿ ಯುವ ಜನಾಂಗ ಸೇರಿದಂತೆ ಲ್ಲರಿಗೂ ಅನುಕೂಲ ಮಾಡಿಕೊಡಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಜನತೆಗೆ ಮನವಿ ಮಾಡಿದರು.

ಮುಖಂಡರಾದ ಶ್ರೀನಿವಾಸ ನಂದಿಗಾವಿ, ಜಿಪಂ ಮಾಜಿ ಸದಸ್ಯ ಬಿ.ಎಂ.ವಾಗೀಶ ಸ್ವಾಮಿ, ಹರಿಹರ ಬ್ಲಾಕ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಮಲೆಬೆನ್ನೂರು ಅಧ್ಯಕ್ಷ ಹಬೀದ್ ಅಲಿ, ಕುಣಿಬೆಳಕೆರೆ ವಿರೂಪಾಕ್ಷಪ್ಪ, ಸಿ.ಎಚ್.ವಿಶ್ವನಾಥ, ಬಣಕಾರ ಚಂದ್ರಪ್ಪ, ಸುರೇಶ, ಚಿತ್ರಾ ಸುರೇಶ, ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು.

- - -

ಬಾಕ್ಸ್‌ ವೀಳ್ಯದೆಲೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಎಲೆ ಪೆಂಡಿ (ವೀಳ್ಯದೆಲೆ) ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ, ರೈತರು ಮತ್ತು ವ್ಯಾಪಾರಸ್ಥರಿಗೆ ಅನಾನುಕೂಲವಾಗುತ್ತಿದೆ. ವೀಳ್ಯದೆಲೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಲೆ ಪೆಂಡಿಗೆ ಬೇಡಿಕೆ ಇದೆ. ಇಲ್ಲಿನ ಎಲೆಗಳನ್ನು ರಫ್ತು ಮಾಡುವುದಕ್ಕೂ ಉತ್ತೇಜನ ನೀಡಲಾಗುವುದು. ಹಿಂದಿನಿಂದಲೂ ಹರಿಹರ ತಾಲೂಕಿನ ಜನತೆ ನಮ್ಮ ಕುಟುಂಬದ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದೀರಿ. ಆ ನಂಬಿಕೆ ನಾವು ಹುಸಿಗೊಳಿಸುವುದಿಲ್ಲ. ನಮ್ಮ ಮೇಲೆ ನಿಮ್ಮ ಆಶೀರ್ವಾದ ಇರಲಿ. ಹರಿಹರ ತಾಲೂಕು, ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ತೋರಿಸುತ್ತೇವೆ ಎಂದು ಹೇಳಿದರು.

- - - -21ಕೆಡಿವಿಜಿ9, 10:

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾನುವಾರ ಹರಿಹರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚಿಸಿದರು.