ಪರಿಸರ ಕಾಳಜಿ, ಗೋಶಾಲೆ ತೆರೆಯುವ ಮೂಲಕ ಸಾಮಾಜಿಕ ಕಾರ್‍ಯಗಳಿಗೂ ಒತ್ತು ನೀಡಲಾಗಿದೆ. ಅದೇ ರೀತಿ ಭಕ್ತರ ಸಹಕಾರದಿಂದ ಮಂಡ್ಯ ನಗರದಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ಕೇಂದ್ರವಾಗಿ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅರಳಿ ಹಾಗೂ ಆಲದ ಮರದ ವೃಕ್ಷದಂತೆ ಆದಿಚುಂಚನಗಿರಿ ಶ್ರೀಮಠ ಇಂದು ವಿಶ್ವದೆಲ್ಲೆಡೆ ತನ್ನ ಕಾರ್ಯವ್ಯಾಪ್ತಿಯನ್ನು ಪಸರಿಸಿಕೊಳ್ಳಲು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ದೂರದೃಷ್ಟಿ ಅಪಾರ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಆದಿಚುಂಚನಗಿರಿ ಶ್ರೀಮಠದ ವತಿಯಿಂದ ನಗರದ ಬಂದೀಗೌಡ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆಯಲ್ಲಿ ಆಶೀರ್ವಚನ ನೀಡಿದ ಅವರು, ಭಾರತೀಯ ಧಾರ್ಮಿಕ ಸಂಸ್ಕೃತಿಯ ಬೀಜವನ್ನು ಜನಸಾಮಾನ್ಯರ ಮನದಲ್ಲಿ ಭಿತ್ತಲು ಶ್ರಮಿಸಿದ ಭೈರವೈಕ್ಯ ಬಾಲಗಂಗಾಧರರ ಜೊತೆ ಪುರುಷೋತ್ತಮಾನಂದನಾಥ ಶ್ರೀಗಳ ಸೇವೆಯೂ ಸ್ಮರಣೀಯ ಎಂದು ಪ್ರಶಂಶಿಸಿದರು.
ಆಧ್ಯಾತ್ಮಿಕ ಕ್ಷೇತ್ರದ ಉನ್ನತಿಯ ಜೊತೆ ಅನ್ನ, ಅಕ್ಷರದ ಅರಿವು ಮೂಡಿಸಲು ಬಾಲಗಂಗಾಧರನಾಥ ಶ್ರೀಗಳು ದೂರದೃಷ್ಟಿ ಹೊಂದಿದ ಫಲವಾಗಿ ನನ್ನಂತಹ ಸಹಸ್ರಾರು ಮಂದಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಇಲ್ಲದಿದ್ದರೆ ಹಲವರ ಬದುಕು ಬೀದಿಪಾಲಾಗುತ್ತಿತ್ತು ಎಂದು ಹೇಳಿದರು.ಹೆಮ್ಮರವಾಗಿ ಬೆಳೆದು ನಿಂತಿರುವ ಶ್ರೀಮಠದ ಫಲ ಭಕ್ತರಿಗೆ ಮತ್ತಷ್ಟು ವಿಸ್ತ್ರತವಾಗಿ ದೊರೆಯಬೇಕೆಂಬ ಡಾ.ನಿರ್ಮಲಾನಂದನಾಥ ಶ್ರೀಗಳ ಅಭಿಲಾಷೆಯಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತಿಗೆ ಶ್ರೀಮಠ ಪ್ರೇರೇಪಿಸುತ್ತಿರುವುದರಿಂದ ಇಂದು ಶ್ರೀಮಠವನ್ನು ಅವಲೋಕಿಸುವ ಕೌತುಕತೆ ದೇಶದೆಲ್ಲೆಡೆ ಸಾಗಿದೆ ಎಂದರು.
ಭಕ್ತ ಸಮುದಾಯದ ಭಕ್ತಿ ಪರಂಪರೆ, ಸಾಂಸ್ಕೃತಿಕ ಹಾಗೂ ದೇಶಪ್ರೇಮ ಮತ್ತು ನಮ್ಮ ಆಚಾರ- ವಿಚಾರಗಳ ಪ್ರಜ್ಞೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ನಾಥ ಪರಂಪರೆಯನ್ನು ಉನ್ನತೀಕರಿಸುವ ಸದುದ್ದೇಶದಿಂದ ಶ್ರೀಮಠದ ವತಿಯಿಂದ ಕಾಲ ಭೈರವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿರುವುದು ಭಕ್ತ ಸಂಕುಲಕ್ಕೆ ವರದಾನವಾಗಲಿದೆ ಎಂದು ತಿಳಿಸಿದರು.ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಶ್ರೀಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಸಾಕ್ಷಾತ್ ಶಿವನೇ ತಪಸ್ಸು ಮಾಡಿದ ಪವಿತ್ರ ಸ್ಥಳ ಎಂದು ಆದಿಚುಂಚನಗಿರಿಯನ್ನು ದಾಖಲಿಸಲಾಗಿದೆ. ಜಿಲ್ಲೆಯ ರೈತರ ಬಳುವಳಿಯನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಕ್ಷೇತ್ರವನ್ನು ಹೆಮ್ಮರವಾಗಿ ಬೆಳೆಸಲು ಬಾಲಗಂಗಾಧರನಾಥ ಶ್ರೀಗಳು ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ ಎಂದರು.
ಪರಿಸರ ಕಾಳಜಿ, ಗೋಶಾಲೆ ತೆರೆಯುವ ಮೂಲಕ ಸಾಮಾಜಿಕ ಕಾರ್‍ಯಗಳಿಗೂ ಒತ್ತು ನೀಡಲಾಗಿದೆ. ಅದೇ ರೀತಿ ಭಕ್ತರ ಸಹಕಾರದಿಂದ ಮಂಡ್ಯ ನಗರದಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ಕೇಂದ್ರವಾಗಿ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಸ್ವಾಮೀಜಿ, ನೆಲಮಂಗಲ ಶನಿಮಹಾತ್ಮ ದೇವಾಲಯದ ಹನುಮಂತಪ್ಪ ಸ್ವಾಮಿ, ಕಾಗಿನೆಲೆ ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಮಠಾಧಿಪತಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ಕೆ.ವಿವೇಕಾನಂದ, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಬಿ.ಚಂದ್ರಶೇಖರ್, ಎಸ್‌ಬಿ ಎಜುಕೇಷನ್ ಟ್ರಸ್ಟ್‌ನ ಡಾ. ಶಿವಲಿಂಗಯ್ಯ, ಮೀರಾ ಶಿವಲಿಂಗಯ್ಯ, ಯುವ ಮುಖಂಡ ಸಚ್ಚಿದಾನಂದ, ಪಿಇಟಿ ಅಧ್ಯಕ್ಷ ವಿಜಯ್ ಆನಂದ್ ಇತರರು ಭಾಗವಹಿಸಿದ್ದರು.
.