ಸಾರಾಂಶ
ಭೈರುಂಬೆ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಹೊಸ ಕಟ್ಟಡ ಅನಿವಾರ್ಯವಾಗಿದೆ. ಹಳೆಯ ಕಟ್ಟಡ ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ. ಜಾಗದ ಸಮಸ್ಯೆಯಿಲ್ಲ. ಗ್ರಾಪಂಗೆ ಸೇರಿದ ಜಾಗವಿದೆ.
ಶಿರಸಿ:
ತಾಲೂಕಿನ ಭೈರುಂಬೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅಲ್ಲಿನ ಸಿಬ್ಬಂದಿ ಜೀವಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.ಹುಲೇಕಲ್ ಹೋಬಳಿಯ ಭೈರುಂಬೆ ಸುಮಾರು ಸಾವಿರ ಮನೆಗಳನ್ನು ಹೊಂದಿದೆ. 1 ಸಾವಿರ ಹೆಕ್ಟೇರ್ ಕಂದಾಯ ಭೂಮಿಯೊಂದಿಗೆ ಅತಿ ವಿಶಾಲವಾದ ವ್ಯಾಪ್ತಿ ಹೊಂದಿದೆ. ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ನೂರಾರು ಗ್ರಾಮಸ್ಥರು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಕಚೇರಿ ಕಟ್ಟಡದ ಸ್ಥಿತಿ ಮಾತ್ರ ಶೋಚನೀಯವಾಗಿದ್ದು, ಯಾವ ಸಮಯದಲ್ಲಾದರೂ ಬೀಳುವ ಅಪಾಯವಿದೆ.ಕಟ್ಟಡದ ಗೋಡೆ, ಮೇಲ್ಚಾವಣಿ ಶಿಥಿಲವಾಗಿ ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಅಗತ್ಯ ದಾಖಲೆಪತ್ರಗಳು ನೀರಿನಲ್ಲಿ ನೆನೆದು ಹಾಳಾಗಿತ್ತು. ಮೇಲ್ಚಾವಣಿಯ ರೀಪು, ಪಕಾಸು ಗೆದ್ದಲು ಹಿಡಿದಿದೆ. ಇದರಿಂದ ವಿಷಜಂತುಗಳು ಒಳ ಪ್ರವೇಶಿಸುತ್ತಿವೆ. ಕಳೆದ ಕೆಲ ತಿಂಗಳ ಹಿಂದೆ ಸಿಬ್ಬಂದಿಗಳು ಇರುವಾಗಲೇ ಹಾವು-ಹರಿಣಿ ಕೊಠಡಿಯ ಒಳಗಡೆ ಬಿದ್ದು ಆಂತಕ್ಕೊಳಗಾಗಿದ್ದರು. ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡಿದ್ದು ಗೋಡೆ ಬಿರುಕು ಬಿಟ್ಟಿದೆ. ಕಟ್ಟಡ ಯಾವ ಸಮಯದಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಪ್ರಾಣ ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದ್ದು, ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಿದೆ. ಶಾಸಕ ಭೀಮಣ್ಣ ನಾಯ್ಕ ಭೈರುಂಬೆ ಗ್ರಾಪಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದ ಕಟ್ಟಡದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದ್ದಾರೆ. ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಹೊಸ ಕಟ್ಟಡ ಮಂಜೂರಿಗೆ ಶಾಸಕರು ಇಚ್ಚಾಶಕ್ತಿ ತೋರಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.ಭೈರುಂಬೆ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಹೊಸ ಕಟ್ಟಡ ಅನಿವಾರ್ಯವಾಗಿದೆ. ಹಳೆಯ ಕಟ್ಟಡ ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ. ಜಾಗದ ಸಮಸ್ಯೆಯಿಲ್ಲ. ಗ್ರಾಪಂಗೆ ಸೇರಿದ ಜಾಗವಿದ್ದು, ಅಲ್ಲಿ ಕಟ್ಟಡ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.ಭೈರುಂಬೆ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಕ್ಕೆ ಕಳೆದ 10 ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡ ನೀಡಲಾಗಿದೆ. ಭೈರುಂಬೆ ಪಿರ್ಕಾ ದೊಡ್ಡದು, ವರ್ಷದೊಳಗೆ ಶಾಸಕರ ಮೂಲಕ ಸುಸಜ್ಜಿತವಾದ ಕಟ್ಟಡ ಕಟ್ಟಲು ಹಣ ಮಂಜೂರು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಭೈರುಂಬೆ ಗ್ರಾಪಂ ಸದಸ್ಯ ಪ್ರಕಾಶ ಹೆಗಡೆ ಎಂದರು.
ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆಯಾದ್ದರಿಂದ ಕಟ್ಟಡ ಉಳಿದುಕೊಂಡಿದೆ. ಪ್ರತಿ ವರ್ಷ ಸುರಿಯುವಂತೆ ಗಾಳಿ ಮಳೆಯಾಗಿದ್ದರೆ ಕಟ್ಟಡ ನೆಲಸಮವಾಗುತ್ತಿತ್ತು. ಮುಂದಿನ ಮಳೆಗಾಲದ ಒಳಗಡೆ ಬದಲಿ ಕಟ್ಟಡ ಅಥವಾ ನೂತನ ಕಟ್ಟಡಕ್ಕೆ ಲೆಕ್ಕಾಧಿಕಾರಿಗಳ ಕಾರ್ಯಾಲಯ ವರ್ಗಾವಣೆಯಾಗಬೇಕು. ಇಲ್ಲವಾದಲ್ಲಿ ಅನಾಹುತ ಉಂಟಾಗುವ ಸಾಧ್ಯತೆಯಿದೆ. ಅಲ್ಲದೇ ಅಗತ್ಯ ದಾಖಲೆ ಪತ್ರಗಳು ನಾಶವಾಗುತ್ತದೆ. ಅತಿ ಅವಶ್ಯವಾದ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಬೇಕು ಎಂದು ಸುರೇಶ ಹಕ್ಕಿಮನೆ ಒತ್ತಾಯಿಸಿದರು.