ಕಾಂಗ್ರೆಸ್ಸಿನಲ್ಲಿದ್ದೇ ಪಕ್ಷದ ಕುತ್ತಿಗೆ ಕೊಯ್ದ ಭಯ್ಯಾಪುರ: ದೊಡ್ಡನಗೌಡ ಪಾಟೀಲ್

| Published : Apr 27 2024, 01:15 AM IST

ಕಾಂಗ್ರೆಸ್ಸಿನಲ್ಲಿದ್ದೇ ಪಕ್ಷದ ಕುತ್ತಿಗೆ ಕೊಯ್ದ ಭಯ್ಯಾಪುರ: ದೊಡ್ಡನಗೌಡ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ತಳುವಗೇರಾದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ ವಿರುದ್ಧ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಕುಷ್ಟಗಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರು ಕಾಂಗ್ರೆಸ್ಸಿನಲ್ಲೇ ಇದ್ದುಕೊಂಡು ಕಾಂಗ್ರೆಸ್ಸಿಗರ ಕುತ್ತಿಗೆ ಕೊಯ್ಯುವ ಕೆಲಸ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದ್ದಾರೆ.

ತಾಲೂಕಿನ ತಳುವಗೇರಾದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಾವು ಯಾವ ಪಕ್ಷಕ್ಕೆ ಮಾತು ಕೊಟ್ಟಿದ್ದೇವೆ, ಆ ಪಕ್ಷಕ್ಕೆ ದುಡಿಯುವ ಕೆಲಸ ಮಾಡುತ್ತೇವೆ ಎಂದು ಅಮರೇಗೌಡ ಹೇಳಿದ್ದಾರೆ. ಅಂದರೆ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಅವರು ಯಾವ ಪಕ್ಷಕ್ಕೆ ಮಾತು ಕೊಟ್ಟಿದ್ದರು? ಯಾರಿಗೆ ದುಡಿದಿದ್ದಾರೆ? ಎಂದು ಉತ್ತರ ನೀಡಬೇಕು ಎಂದರು.

ಹಿಂದಿನ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಎರಡು ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಿದ್ದರು. ನಾವು ಯಾಕೆ ಎಂದು ಕೇಳಿದಾಗ ಅವರು ನಮಗಾಗಿ ದುಡಿದಿದ್ದಾರೆ ಎಂದು ಹೇಳುವ ಮೂಲಕ ನಮ್ಮ ಬಾಯಿ ಮುಚ್ಚಿಸಿದ್ದರು. ಅದು ಯಾಕೆಂದು ಈಗ ನಮಗೆ ಅರ್ಥವಾಗಿದೆ. ಅಮರೇಗೌಡ ಹಾಗೂ ಕರಡಿ ಸಂಗಣ್ಣ ಅವರ ನಂಟು ಏನೆಂಬುದು ತಿಳಿದಿದೆ. ಭಯ್ಯಾಪುರ ಅವರು ಕಾಂಗ್ರೆಸ್ಸಿನಲ್ಲಿದ್ದೇ ಪಕ್ಷದ ಕುತ್ತಿಗೆ ಕೊಯ್ಯುವ ಕೆಲಸ ಮಾಡಿದ್ದಾರೆ ಎಂದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಬಿಜೆಪಿ ನನಗೆ ಕುಟುಂಬ ಇದ್ದಂತೆ. ನಾನು ಬೆಳೆದ ಪಕ್ಷಕ್ಕೆ ಮರಳಿದ್ದೇನೆ. ಏನೋ ಒಂದು ಕೆಟ್ಟ ಗಳಿಗೆಯಲ್ಲಿ ಮನೆ ಬಿಟ್ಟುಹೋಗಿದ್ದೆ. ಹಿರಿಯರು ಕರೆದಾಗ ವಾಪಸ್‌ ಬಂದಿದ್ದೇನೆ. ಸಂಗಣ್ಣ ಕರಡಿ ಅವರ ತರಹ ನಾನು ಒಂಬತ್ತು ಸಲ ಪಕ್ಷ ಬದಲಾವಣೆ ಮಾಡಿಲ್ಲ ಎಂದು ಹೇಳಿದರು.

ಅಮರೇಗೌಡ ಭಯ್ಯಾಪುರ ಅವರು ಮತಗಳಿಗಾಗಿ ಜಾತಿ ಬದಲಾವಣೆ ಮಾಡಿಕೊಳ್ಳುವ ವ್ಯಕ್ತಿಯಾಗಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ಅವರ ಕಾರ್ಯಕ್ರಮಗಳು ನಡೆದ ಸಂದರ್ಭದಲ್ಲಿ ರೆಡ್ಡಿ ಲಿಂಗಾಯತ ಎಂದು ಹೇಳುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತನೆಂದು ಹೇಳುತ್ತಾರೆ. ಅವರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗಿಯಿತು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗುಣ್ಣನವರ, ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಇದ್ದರು.