ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮನೆ ಮನೆ ಸಾಹಿತ್ಯಗೋಷ್ಠಿ ಅಂಗವಾಗಿ ಬೇಲೂರಿನ ಸಾಹಿತಿ ಹಾಗೂ ಹರಿಕಥಾ ವಿದುಷಿ ಇಂದಿರಮ್ಮ ಅವರ ಸ್ವಗೃಹದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಅಧುನಿಕ ಕಾಲಘಟ್ಟದಲ್ಲಿ ದೇವರನಾಮ ಮತ್ತು ಭಜನಾ ಗೀತೆಗಳು ನಶಿಸುತ್ತಿವೆ. ಈ ಹಿಂದೆ ಪ್ರತಿ ದೇವಾಲಯದಲ್ಲಿ ರಾಮನವಮಿ ಮತ್ತು ಕಾರ್ತಿಕ ಮಾಸದಲ್ಲಿ ಭಜನೆ ನಡೆಸುತ್ತಿರುವ ವಾಡಿಕೆ ಇತ್ತು. ಆದರೆ ದೃಶ್ಯ ಮಾಧ್ಯಮಗಳ ಭರಾಟೆಯಿಂದ ಭಜನೆ ಗೀತೆಗಳು ಮೂಲೆ ಸೇರುತ್ತಿವೆ. ಭಜನೆ ಗೀತೆಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಮತ್ತು ಸಂಸ್ಕಾರ ನೀಡುವ ಕಾರಣದಿಂದ ಇಂತಹ ಭಜನೆ ಗೀತೆಗಳನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುವ ಅಗತ್ಯವಿದೆ. ಈ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹರಿಕಥಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಸಾಹಿತಿ ಇಂದಿರಮ್ಮ ಮಾತನಾಡಿ, ಹಿಂದೆ ಯಾವುದೇ ಮಾಧ್ಯಮಗಳಿಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ದೇಗುಲದಲ್ಲಿ ಭಜನೆಯ ಮೂಲಕ ಮನರಂಜನೆ ಮತ್ತು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಭಜನೆಯು ಕೇವಲ ಹಿರಿಯರಿಗೆ ಸೀಮಿತವಾಗಿಲ್ಲ. ಸಣ್ಣ ಮಕ್ಕಳಿಗೆ ಭಜನೆಯ ಮಹತ್ವವನ್ನು ತಿಳಿಸಬೇಕಿದೆ ಎಂದು ತಿಳಿಸಿದರು.ಶಾರದಾ ಶಂಕರ ಭಜನಾ ಮಂಡಳಿ( ಮಹಿಳೆಯರು)ಮಧ್ವಪತಿ ವಿಠ್ಠಲ ಭಜನಾ ಮಂಡಳಿ,ಶಾರದಾ ಶಂಕರ ಭಜನಾ ಮಂಡಳಿ ( ಪುರುಷರು) ಗಾಯಿತ್ರಿ ಭಜನಾ ಮಂಡಳಿ, ಪೂರ್ಣಪ್ರಜ್ಞ ಭಜನಾ ಮಂಡಳಿ, ಚನ್ನಕೇಶವ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ವೀರಾಂಜನೇಯ ಭಜನಾ ಮಂಡಳಿಯವರು ಭಾಗವಹಿಸಿದ್ದರು.
ಹಾಸನ ಹರಿಕಥಾ ವಿಧೂಷಿ ಬೇಲೂರು ನಾಗಲಕ್ಷ್ಮೀ ಶಿವರಾಂ, ಕಲಾವಿದ ಚಂದನ ಕುಮಾರ್, ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಆರ್.ಎಸ್.ಮಹೇಶ್, ಮ.ಶಿವಮೂರ್ತಿ, ಕೆ.ಆರ್.ಮಂಜುನಾಥ ಇನ್ನೂ ಮುಂತಾದವರು ಹಾಜರಿದ್ದರು.ಭಜನೆಗೆ ಜಾತಿಯಲ್ಲ,ಭಕ್ತಿ ಮುಖ್ಯ:
ಭಜನೆಗೆ ಯಾವುದೇ ಜಾತಿ,ಧರ್ಮ, ವರ್ಗದ ಭೇದವಿಲ್ಲ, ಭಜನೆಗೆ ಭಕ್ತಿಯಿಂದ ಕೂಡಿದ ಮನಸ್ಸು ಇರಬೇಕು, ಭಜನೆ ದೇವರ ಒಲಿಸುವ ನಿಟ್ಟಿನಲ್ಲಿ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಭಜನೆ ಕಲೆಯನ್ನು ಬೇಲೂರಿನಲ್ಲಿ ಅಸಂಖ್ಯಾತರು ಕಲಿತು ಹಾಡುತ್ತಿರುವುದು ಸಂತೋಷ ತಂಂದಿದೆ. ವಾದಿರಾಜರು. ಪುರಂದರದಾಸರು, ಕನಕದಾಸರು, ವಚನ ಸಾಹಿತ್ಯ ಹೀಗೆ ನಾನಾ ಕೀರ್ತನೆಗಳನ್ನು ಹೇಳುವ ಜೊತೆಗೆ ಅವರು ನೀಡಿದ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾಸನದ ಖ್ಯಾತ ಹರಿಕಥಾ ವಿದ್ವಾನ್ ನಾಗಲಕ್ಷ್ಮೀ ಶಿವರಾಂ ಹೇಳಿದರು.