ಸಾರಾಂಶ
ಕೊಪ್ಪಳ:
ನಗರದ ಪ್ಯಾಟಿ ಈಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಭಕ್ತ ಸಾಗರವೇ ಹರಿದು ಬಂದಿತ್ತು.13ನೇ ದಿನವಾದ ಸೋಮವಾರ ರಾತ್ರಿ ಹೆದ್ದಾರಿಯುದ್ದಕ್ಕೂ ಬೃಹತ್ ಮೆರವಣಿಗೆ ನಡೆಯಿತು. ನಗರದ ಪ್ಯಾಟಿ ಈಶ್ವರ ದೇವಸ್ಥಾನದಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಿದ್ದ ಮೆರವಣಿಗೆ ಮುಂದೆ ಸಾಗುತ್ತಲೇ ಇರಲಿಲ್ಲ. ರಾತ್ರಿ 9 ಗಂಟೆಯಾದರೂ ನೂರು ಮೀಟರ್ ಮುಂದೆ ಸಾಗಿರಲಿಲ್ಲ. 2-3 ಗಂಟೆಗಳ ಕಾಲವೂ ಅಲ್ಲಿಯೇ ಮೆರವಣಿಗೆಯಲ್ಲಿ ಸೇರಿದ್ದ ಭಕ್ತರು ಭಾವಪರವಶರಾಗಿ ನರ್ತಿಸುತ್ತಿದ್ದರು. ಇದುವರೆಗೂ ನಡೆದ ಗಣೇಶ ಮೆರವಣಿಗೆಯಲ್ಲಿ ಅತ್ಯಧಿಕ ಸಂಖ್ಯೆಯ ಭಕ್ತರು ಸೇರಿದ್ದು ಇಲ್ಲೇ.
ಉತ್ಸಾಹದಿಂದ ನರ್ತಿಸಿದ ಮಹಿಳೆಯರು:ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣೆಯಲ್ಲಿ ವಿಶೇಷ ಎಂದರೆ ಮಹಿಳೆಯರು ಮತ್ತು ಯುವತಿಯರಿಗೆ ನರ್ತಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಮಹಿಳೆಯರು ಅತ್ಯುತ್ಸಾಹದಿಂದ ಕುಣಿದು ಕುಪ್ಪಳಿಸಿದರು. ಯುವಕರಿಗಿಂತಲೂ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು.
ಹೆದ್ದಾರಿ ಭರ್ತಿ:ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಪೂರ್ತಿ ಭರ್ತಿಯಾಗಿತ್ತು. ಈ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ವಾಹನ ಸವಾರರು ಹರಸಾಹಸ ಮಾಡಬೇಕಾಯಿತು.
ಸಂಚಾರದಟ್ಟಣೆ ನಿಯಂತ್ರಿಸಲು ಪೊಲೀಸರು ಯೋಜನೆ ರೂಪಿಸಿದ್ದರು. ಅಶೋಕ ವೃತ್ತದಲ್ಲಿ ಮತ್ತು ಬಸವೇಶ್ವರ ವೃತ್ತದಿಂದಲೇ ವಾಹನಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ, ಸಂಚಾರ ದಟ್ಟಣೆ ಹತೋಟಿಯಲ್ಲಿದ್ದರೂ ಸೇರಿದ್ದ ಜನಸ್ತೋಮದಿಂದಾಗಿ ಹೆದ್ದಾರಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು ಕಂಡು ಬಂದಿತು.