ಮೇ 1ರಂದು ಭಕ್ತ ಸಮಾರಾಧನೆ ಉತ್ಸವ

| Published : Apr 20 2025, 01:50 AM IST

ಸಾರಾಂಶ

ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನೆ ಮೇ ಒಂದರಂದು ಗುರುವಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನೆ ಮೇ ಒಂದರಂದು ಗುರುವಾರ ನಡೆಯಲಿದೆ.

ಭಕ್ತ ಸಮಾರಾಧನೆ ಉತ್ಸವದ ಅಂಗವಾಗಿ ಅಂದು ತುಲಾಭಾರ ಸೇವೆ, ವಿವಿಧ ಪೂಜಾ ವಿಧಿ ವಿಧಾನಗಳು, ದೇವರ ನೃತ್ಯ ಬಲಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಅಂದು ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೌಳಿಯ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ನಾನಾ ಪೂಜಾ ಕೈಂಕರ್ಯಗಳು ನೆರವೇರಲಿದ್ದು ಭಕ್ತರು ಮತ್ತು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದಲ್ಲಿ ಅಂದು ಬೆಳಗ್ಗೆ ಆರು ಗಂಟೆಗೆ ಅಭಿಷೇಕ, ಬಳಿಕ ಗಣಪತಿ ಹೋಮ ನಡೆಯಲಿದೆ. ಬೆಳಗ್ಗೆ 8.30 ರಿಂದ ರುದ್ರ ಮಹಾಯಾಗ ನಡೆಯಲಿದೆ ತುಲಾಭಾರ ಸೇವೆಗಳನ್ನು 9.30ರಿಂದ 10.30 ರವರೆಗೆ ನಡೆಸಲಾಗುವುದು. 12:30 ಕ್ಕೆ ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆದ ಬಳಿಕ 2 ಗಂಟೆಗೆ ದೇವರ ನೃತ್ಯ ಬಲಿ ಜರುಗಲಿದೆ.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಮುಂಡಂಡ ಸಿ. ನಾಣಯ್ಯ ನವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಎ.ಎಸ್ ಪೊನ್ನಣ್ಣ , ಮಾಜಿ ರಾಜ್ಯಸಭಾ ಸದಸ್ಯ ಡಿ ಕುಪೇಂದ್ರ ರೆಡ್ಡಿ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತೀತೀರ ರೋಷನ್ ಅಪ್ಪಚ್ಚು ಪಾಲ್ಗೊಳ್ಳಲಿದ್ದಾರೆ.