ಮಕರ ಸಂಕ್ರಮಣದ ದಿನದಂದು ಗೋಕರ್ಣಕ್ಕೆ ಭಕ್ತಸಾಗರ

| Published : Jan 15 2025, 12:47 AM IST

ಮಕರ ಸಂಕ್ರಮಣದ ದಿನದಂದು ಗೋಕರ್ಣಕ್ಕೆ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕರ್ಣ ಹಾಗೂ ಮುರ್ಡೇಶ್ವರ ಕಡಲ ತೀರಗಳಲ್ಲಿ ಜನರು ತಂಡೋಪತಂಡವಾಗಿ ಸಮುದ್ರ ಸ್ನಾನ ಮಾಡಿದರು.

ಕಾರವಾರ/ಗೋಕರ್ಣ: ಮಕರ ಸಂಕ್ರಮಣ ಹಿನ್ನೆಲೆ ಜಿಲ್ಲೆಯ ಪ್ರಮುಖ ದೇವಾಲಯಗಳು ಹಾಗೂ ಪವಿತ್ರ ತಾಣಗಳಲ್ಲಿ ಜನಜಂಗುಳಿ ಕಂಡಬಂತು.

ಗೋಕರ್ಣ, ಮುರ್ಡೇಶ್ವರ, ಸಹಸ್ರಲಿಂಗ, ಯಾಣ ಮತ್ತಿತರ ಕಡೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.

ಧಾರವಾಡ, ಹಾವೇರಿ, ಗದಗ, ಬೆಳಗಾವಿ ಮತ್ತಿತರ ಕಡೆಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗೋಕರ್ಣ ಹಾಗೂ ಮುರ್ಡೇಶ್ವರ ಕಡಲ ತೀರಗಳಲ್ಲಿ ಜನರು ತಂಡೋಪತಂಡವಾಗಿ ಸಮುದ್ರ ಸ್ನಾನ ಮಾಡಿದರು. ಸಂಕ್ರಾಂತಿಯಂದು ರಜಾ ಇರುವುದರಿಂದ ಜನತೆ ಕುಟುಂಬದವರೊಟ್ಟಿಗೆ ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಮೈಲುದ್ದ ಸರದಿ ಸಾಲಿನಲ್ಲಿ ನಿಂತು ಆತ್ಮಲಿಂಗದ ದರ್ಶನ ಪಡೆದರು.

ಸಂಕ್ರಮಣ ಹಿನ್ನೆಲೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ನಡೆಯಿತು. ಹಲವೆಡೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಿದ್ದರು. ಜನತೆ ಮನೆ ಮನೆಯಲ್ಲೂ ಶ್ರದ್ಧಾ- ಭಕ್ತಿಯಿಂದ ಪೂಜೆ ನೆರವೇರಿಸಿ ಕುಸುರೆಳ್ಳು, ಸಿಹಿ ತಿಂಡಿಗಳ ವಿನಿಮಯ ಮಾಡಿಕೊಂಡರು.

ಗೋಕರ್ಣಕ್ಕೆ ಭಕ್ತಸಾಗರ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಂಗಳವಾರ ಗೋಕರ್ಣಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.ಸಮುದ್ರದಲ್ಲಿ ಪುಣ್ಯಸ್ನಾನ ಮಾಡಿ ಇಲ್ಲಿನ ಮಹಾಗಣಪತಿ, ಮಹಾಬಲೇಶ್ವರ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದರು.ಮಕರ ಸಂಕ್ರಮಣ ದಿನದಂದು ಮನೆಯ ಬಿಟ್ಟು ಹೊರಹೋಗುವ ಪದ್ಧತಿ ಉತ್ತರ ಕರ್ನಾಟಕದ ಹಲವು ಕಡೆ ಇದ್ದು, ಅದರಂತೆ ಧಾರವಾಡ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಭಕ್ತರು ಬಂದಿದ್ದರು. ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿನ ಮುಖ್ಯ ಕಡಲತೀರದಲ್ಲಿ ಜನಜಾತ್ರೆ ನೆರೆದಿತ್ತು.

ನೀರಿಗಿಳಿದು ಸ್ನಾನ ಮಾಡುವವರ ಮೇಲೆ ಜೀವರಕ್ಷಕ ಸಿಬ್ಬಂದಿ ನಿಗಾ ವಹಿಸಿ ಮುಂದೆ ಹೋಗದಂತೆ ನಿಯಂತ್ರಿಸಿದರು. ದೇವಾಲಯದಲ್ಲಿ ದರ್ಶನಕ್ಕೆ ಸರದಿ ಸಾಲು ನೆರೆದಿತ್ತು. ಪ್ರಮುಖ ಮಾರ್ಗಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರಕ್ಕೆ ತೊಡಕಾಗಿತ್ತು. ಒಟ್ಟಾರೆ ಹಬ್ಬದ ಸಂಭ್ರಮದಲ್ಲಿ ಪುಣ್ಯ ಕ್ಷೇತ್ರಕ್ಕೆ ಭಕ್ತಸಾಗರ ಹರಿದುಬಂದಿತ್ತು.ಸಹಸ್ರಲಿಂಗಕ್ಕೆ ಹರಿಬಂದ ಭಕ್ತಸಾಗರ

ಶಿರಸಿ: ಮಕರ ಸಂಕ್ರಾಂತಿ ಪ್ರಯುಕ್ತ ತಾಲೂಕಿನ ಸಹಸ್ರಲಿಂಗಕ್ಕೆ ಮಂಗಳವಾರ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.ಪ್ರತಿವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸಹಸ್ರಲಿಂಗ ಕ್ಷೇತ್ರಕ್ಕೆ ಹಾವೇರಿ, ಹಾನಗಲ್ಲ, ದಾವಣಗೆರೆ ಭಾಗಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ, ಸ್ನಾನ ಮಾಡಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

ಭಕ್ತರು ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡುವಾಗ ಅಹಿಕರ ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.